ಬೆಂಗಳೂರು: : ಕೇಂದ್ರ ಸರ್ಕಾರ ಏಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 8 ಕೋಟಿ ಫಲಾನುಭವಿಗಳಿಗೆ ಮೂರು ಗ್ಯಾಸ್ ಸಿಲಿಂಡರ್‍ಗಳನ್ನು ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ವಿತರಿಸಲಿದೆ.

ಈ ಯೋಜನೆಯನ್ವಯ ಮೊದಲ ತಿಂಗಳ ಸಿಲಿಂಡರ್ ಮೊತ್ತವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಕಡ್ಡಾಯವಾಗಿ ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ ಐವಿಅರ್‍ಎಸ್ (IVRS) ಬುಕ್ಕಿಂಗ್ ಮಾಡಿ ತಮ್ಮ ಮೊದಲ ಸಿಲಿಂಡರ್ ಪಡೆಯಬಹುದಾಗಿದೆ. ಮೊದಲ ತಿಂಗಳ ಜಮಾ ಆದ ಹಣದಿಂದ ಗ್ಯಾಸ್ ಸಿಲಿಂಡರ್ ಪಡೆದರೆ ಮಾತ್ರ ಮುಂದಿನ ತಿಂಗಳುಗಳಲ್ಲಿ 2 ಮತ್ತು 3 ನೇ ಸಿಲಿಂಡರ್ ಪಡೆಯಬಹುದಾಗಿರುತ್ತದೆ. ಸದರಿ ಬಾಬ್ತು ಹಣವು ಅವರವರ ಖಾತೆಗೆ 2 ಅಥವಾ 3 ನೇ ತಾರೀಖಿನಲ್ಲಿ ಜಮೆಯಾಗುವುದು.

ಒಂದು ಸಿಲಿಂಡರ್ ಪಡೆದ ನಂತರ ಮತ್ತೊಂದು ಸಿಲಿಂಡರ್ ಪಡೆಯಲು ಕನಿಷ್ಟ 30 ದಿನಗಳ ಅಂತರವಿರಬೇಕಾಗಿರುತ್ತದೆ. ಮೊದಲ ತಿಂಗಳ ಜಮಾ ಆದ ಹಣದಿಂದ ನೀವು ಗ್ಯಾಸ್ ಸಿಲಿಂಡರ್ ಪಡೆಯದೇ ಇದ್ದರೆ ಮುಂದಿನ ತಿಂಗಳ ಗ್ಯಾಸ್‍ಸಿಲಿಂಡರ್ ಹಣ ಜಮಾ ಆಗುವುದಿಲ್ಲ ಎಂಬುದನ್ನು ಗ್ರಾಹಕರು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ.