ಬೆಂಗಳೂರು: ನಾಳೆಯಿಂದ ಮಾಲ್, ಚಿತ್ರಮಂದಿರ, ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ಓಪನ್ ಮಾಡಬಹುದು. ಆದರೆ, ಪ್ರತೀ ಭಾನುವಾಕ ರಾಜ್ಯವನ್ನು ಸಂಪೂರ್ಣವಾಗಿ ಲಾಕ್’ಡೌನ್ ಮಾಡಲಾಗುತ್ತದೆ ಎಂದು ಮುಖ್ಯ ಮಂತ್ರಿ ಯಡಿಯೂರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾಕ್​ಡೌನ್ 4.0ಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಸಂಪುಟದ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಭಾನುವಾರ ರಂದು ಯಾವುದೇ ಮದ್ಯದ ಅಂಗಡಿಗಳು ತೆರೆಯುವುದಿಲ್ಲ.  ರಾಜ್ಯದಲ್ಲಿ ಇಂದಿನಿಂದ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದು, ಕಂಟೈನ್​ಮೆಂಟ್​​ ಝೋನ್​ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕಾನೂನು ಮೀರಿದರೆ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲಾಗುವುದು. ಜನರ ಓಡಾಟಕ್ಕಾಗಿ ನಾಳೆಯಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿದಂತೆ ಎಲ್ಲ ಬಸ್​​ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ ಎಂದರು.

ಒಂದು ಬಸ್​ನಲ್ಲಿ ಕೇವಲ 30 ಜನರಿಗೆ ಪ್ರಯಾಣ ಮಾಡುವ ಅವಕಾಶ ನೀಡಲಾಗಿದೆ. ಬಸ್‌ನಲ್ಲಿ ಪ್ರಯಾಣಿಸುವವರು ಮಾಸ್ಕ್​ ಅನ್ನು ಕಡ್ಡಾಯವಾಗಿ ಧರಿಸಬೇಕು. ಮಾಸ್ಕ್​ ಹಾಕದೇ ಇದ್ದರೆ ದಂಡ ವಿಧಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಟೋ, ಟ್ಯಾಕ್ಸಿ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಅವರಿಗೂ ಮಾಸ್ಕ್​ ಕಡ್ಡಾಯಗೊಳಿಸಲಾಗಿದೆ. ನಾಳೆಯಿಂದ ಮಾಲ್​​, ಸಿನಿಮಾ ಥಿಯೇಟರ್, ಹೋಟೆಲ್​ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ರಾಜ್ಯದೊಳಗೆ ಓಡಾಡಲು ರೈಲುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಹೊರಗಡೆಯಿಂದ ಬರುವ ಟ್ರೇನ್​ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು.