ಬೆಂಗಳೂರು : ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 16,838 ಹುದ್ದೆಗಳನ್ನು ಈ ವರ್ಷಾಂತ್ಯದೊಳಗೆ ಭರ್ತಿ ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಸುಪ್ರೀಂಕೋರ್ಟ್ ಆದೇಶದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಸಿಜೆ ಎ.ಎಸ್.ಓಕ್ ಹಾಗೂ ನ್ಯಾ. ಹೆಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಒಟ್ಟು 65,214 ಮಂಜೂರಾದ ಹುದ್ದೆಗಳಿವೆ. ಆ ಪೈಕಿ 48,376 ಹುದ್ದೆಗಳು ಭರ್ತಿಯಾಗಿವೆ. ಇನ್ನು 16,838 ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಲ್ಲಿ 9146 ಪೊಲೀಸ್ ಕಾನ್ಸ್ ಟೇಬಲ್ ಶ್ರೇಣಿಯವು ಎಂದು ನ್ಯಾಯಾಪೀಠಕ್ಕೆ ತಿಳಿಸಿದರು.

ಹಾಲಿ ಖಾಲಿಯಿರುವ ಹುದ್ದೆಗಳನ್ನು ಮತ್ತು 2018-22 ರಲ್ಲಿ ನಿವೃತ್ತರಾಗಲಿರುವ ಹುದ್ದೆಗಳನ್ನು ಗಮನಿಸಿ 1223 ಸಬ್ ಇನ್ಸ್ ಪೆಕ್ಟರ್ ಮತ್ತು13,185 ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.