ಚಿತ್ರದುರ್ಗ; ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಲಾಖೆಗೆ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡಬೇಕು ಜೊತೆಗೆ ಜನಸಾಮಾನ್ಯರಿಗೆ ಗೌರವ, ಅಪರಾಧಿಗಳಿಗೆ ಭಯದಲ್ಲಿಡುವ ನಿಟ್ಟಿನಲ್ಲಿ ನ್ಯಾಯ ಸಮ್ಮತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಜಿಲ್ಲಾ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದು ಈ ವೇಳೆ ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಸಹಿಸುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಬಾರದು, ಬಡವರು, ಜನಸಾಮಾನ್ಯರು ಠಾಣೆಗೆ ಬಂದಾಗ ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಸಿಗಬೇಕಾದ ನ್ಯಾಯವನ್ನು ಕೊಡಿಸುವ ಕೆಲಸ ಮಾಡಬೇಕು. ಪಕ್ಷಪಾತವಾಗಿ ಕೆಲಸ ಮಾಡಿದಲ್ಲಿ ನಿಮ್ಮನ್ನು ಯಾರು ಉಳಿಸಲು ಸಾಧ್ಯವಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರಾಮಾಣಿಕತೆ, ದಕ್ಷತೆ ಹಾಗೂ ನ್ಯಾಯಸಮ್ಮತೆ ಮಾತ್ರ ನಿಮ್ಮ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು.

ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸಿ: ಪೊಲೀಸರು ಜನಸಾಮಾನ್ಯರೊಂದಿಗೆ ಅತ್ಯಂತ ಸೌಜನ್ಯದಿಂದ ವರ್ತಿಸಬೇಕು. ಅವರ ಗೌರವ ಪಡೆಯುವ ಪ್ರಯತ್ನ ಮಾಡಬೇಕು. ಅಪರಾಧ ಮಾಡುವವರು ಹಾಗೂ ಸಮಾಜ ದ್ರೋಹಿಗಳ ಎದೆಯಲ್ಲಿ ಭಯ ಹುಟ್ಟಿಸುವ ರೀತಿಯಲ್ಲಿ ನಿಮ್ಮ ಕಾರ್ಯಾಚರಣೆ ಇರಬೇಕು ಎಂದು ಸಚಿವರು ತಿಳಿಸಿದರು.

ಅಪರಾಧಿಗಳ ಜೊತೆ ಸ್ನೇಹ ಸಲ್ಲದು: ಪೊಲೀಸ್ ಸಿಬ್ಬಂದಿ ಅಪರಾಧಿಗಳ ಜೊತೆ ಕೈಜೋಡಿಸುವುದನ್ನು ಸಹಿಸುವುದಿಲ್ಲ. ಬಹಳಷ್ಟು ಮಂದಿ ಅಪರಾಧಿಗಳ ಜೊತೆ ಸ್ನೇಹ ಮತ್ತು ಜನಸಾಮಾನ್ಯರ ಜೊತೆ ಕಠಿಣವಾಗಿ ನಡೆದುಕೊಂಡ ಉದಾಹರಣೆಗಳಿವೆ. ಇಂತಹ ನಡವಳಿಕೆ ಬದಲಾಣೆಯಾಗಬೇಕು. ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸಿ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಬಡವರ, ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಕಾನೂನು ಪ್ರಕಾರ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು. ಒಳ್ಳೆಯ ಕೆಲಸ ಮಾಡಲು ಒಂದು ಪ್ರಕರಣ ಸಾಕು ಎಂದು ಹೇಳಿದರು.

ಸಭೆಯಲ್ಲಿ ದಾವಣಗೆರೆ ಪೂರ್ವ ವಲಯ ಐಜಿಪಿ ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.