ಬೆಂಗಳೂರು : ಪದವಿ ಪೂರ್ವ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಪಿಯು ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವವರ ಪೈಕಿ ಇದುವರೆಗೂ ಅಗತ್ಯ ದಾಖಲೆ ಮತ್ತು ನೈಜತೆ ಪ್ರಮಾಣ ಪತ್ರ ಸಲ್ಲಿಸದ 377 ಅಭ್ಯರ್ಥಿಗಳು ತಕ್ಷಣ ಸಕ್ಷಮ ಪ್ರಾಧಿಕಾರಗಳಿಂದ ಪ್ರಮಾಣ ಪತ್ರ ಸಲ್ಲಿಸಬೇಕೆಂದು ಇಲಾಖೆ ಸೂಚನೆ ನೀಡಿದೆ.

ರಾಜ್ಯ ಸರ್ಕಾರವು ಪದವಿ ಪೂರ್ವ ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವವರ ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ಆರಂಭಿಸಿದ್ದು, ಈ ವೇಳೆ ಆಯ್ಕೆಯಾಗಿರುವ ಒಟ್ಟು 813 ಅಭ್ಯರ್ಥಿಗಳ ಪೈಕಿ 377 ಅಭ್ಯರ್ಥಿಗಳು ಅಗತ್ಯ ದಾಖಲೆ ಮತ್ತು ನೈಜತೆಯ ಪ್ರಮಾಣ ಪತ್ರಗಳನ್ನು ಸಲ್ಲಿಸಿಲ್ಲ ಎಂದು ಇಲಾಖೆ ತಿಳಿಸಿದೆ.

ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ವೈದ್ಯಕೀಯ ವರದಿ, ಜಾತಿ ಸಿಂಧುತ್ವ, ಪೊಲೀಸ್, ಗ್ರಾಮೀಣಾ ವ್ಯಾಸಂಗ, ಎಸ್‌ಎಸ್‌ಎಲ್ ಸಿ,ಬಿಇಡಿ, ಸ್ನಾತಕೋತ್ತರ ಪದವಿ, ಕನ್ನಡ ಮಾಧ್ಯಮ,ಕಲ್ಯಾಣ ಕರ್ನಾಟಕ ಭಾಗದ ಸ್ವಗ್ರಾಮ ಪ್ರಮಾಣ ಪತ್ರ. ಅಂಗವಿಕಲ ಅಭ್ಯರ್ಥಿಗಳ ನೈಜತೆ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ಸಲ್ಲಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.