ಪತ್ರಕರ್ತ ಎನ್ನುವುದು ವೃತ್ತಿಯಲ್ಲ ಅದೊಂದು ಜವಾಬ್ದಾರಿ: ಶಾಸಕ ಟಿ. ರಘುಮೂರ್ತಿ
ಚಿತ್ರದುರ್ಗ: ಪತ್ರಕರ್ತ ಎನ್ನುವುದು ವೃತ್ತಿಯಲ್ಲ ಬದಲಿಗೆ ಅದೊಂದು ಜವಾಬ್ದಾರಿಯಾಗಿದೆ. ಸಮಾಜದ ಸಮಸ್ಯೆಗಳನ್ನು ಅರಿತು ಅದರ ಪರಿಹಾರಕ್ಕೆ ಪ್ರಯತ್ನಿಸುವುದು ಪತ್ರಿಕೆ ಮತ್ತು ಪತ್ರಕರ್ತನ ಕರ್ತವ್ಯವಾಗಿದೆ ಎಂದು ಚಳ್ಳಕೆರೆ ಶಾಸಕರಾದ ಟಿ.ರಘುಮೂರ್ತಿ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಂಗ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಆಗಸ್ಟ್ ೨೭ರ ಗುರುವಾರ ಹಮ್ಮಿಕೊಂಡಿದ್ದ ಕೋವಿಡ್ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರ ಪಾತ್ರ ಕುರಿತು ವಿಚಾರ ಸಂಕಿರಣ ಮತ್ತು ಪತ್ರಿಕಾ ದಿನಾಚರಣೆ ಹಾಗೂ ಕೋರೋನಾ ವಾರಿಯರ್ಸ್ ಗಳಿಗೆ ಸನ್ಮಾನವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೆ ಮತ್ತು ಪತ್ರಕರ್ತರು ಯಾವುದೇ ಜಾತಿ, ಧರ್ಮ, ಸಂಬಂಧಗಳಿಗೆ ಸಿಲುಕದೆ ನಿಷ್ಪಕ್ಷವಾಗಿ ಕೆಲಸಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ, ಸಣ್ಣ ಸಮಸ್ಯೆಯಾದರು ಅದನ್ನು ಪತ್ರಿಕೆಗಳಲ್ಲಿ ಬರೆಯುವುದರ ಮೂಲಕ ಅದರ ಪರಿಹಾರಕ್ಕೆ ಮುಂದಾಗಬೇಕಿದೆ. ಇದಕ್ಕೆ ಉದಾಹರಣೆ ಎಂಬಂತೆ ತುರುವನೂರು ಹೋಬಳಿಯ ಕಾಲೇಜು ಸ್ಥಳಾಂತರ ವಿಷಯವನ್ನ ಹೆಚ್ಚು ಪ್ರಚಾರಮಾಡಿ ಕಾಲೇಜು ಉಳಿಯುವಂತೆ ಮಾಡಿದ್ದಾರೆ ಎಂದ ಅವರು ಪತ್ರಕರ್ತ ಎನ್ನುವುದು ವೃತ್ತಿಯಲ್ಲ ಬದಲಿಗೆ ಅದೊಂದು ಜವಾಬ್ದಾರಿಯುತ ಸ್ಥಾನವಾಗಿದೆ ಇದರಿಂದ ಸಮಾಜದ ಪ್ರಗತಿಗೆ ದಾರಿಯಾಗಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಮಾಧ್ಯಮಗಳು ಮತ್ತು ಪತ್ರಕರ್ತರ ಪಾತ್ರ ಅತ್ಯಮೂಲ್ಯವಾಗಿದೆ. ಇಂದು ದೇಶದಲ್ಲಿ ಏನಾದರೂ ಯಾವುದೇ ಉತ್ತಮ ಕೆಲಸಗಳು ಆಗುತ್ತಿವೆ ಅದಕ್ಕೆ ಪತ್ರಕರ್ತರ ಸಾಮಾಜಿಕ ಬದ್ಧತೆ ಕಾರಣ. ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ವಾರಿಯರ್ಸಗಳಾಗಿ ಪತ್ರಕರ್ತರು ಮಾಡಿರುವ ಕೆಲಸ ಅಪಾರವಾಗಿದೆ. ಇಂದು ಪತ್ರಿಕೆಗಳು ಟಿವಿ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯಿಂದ ಉತ್ತಮ ಕಾರ್ಯಮಾಡುತ್ತಿವೆ. ಮತ್ತು ವೈಯಕ್ತಿಕವಾಗಿ ನನಗೆ ಪತ್ರಕರ್ತರ ಸೇವಾಕಾರ್ಯದ ಬಗ್ಗೆ ಹೆಮ್ಮೆ ಇದೆ. ಇಂದು ಆಗಿರುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸಿಇಒ ಟಿ. ಯೋಗೇಶ್, ಜಿಲ್ಲಾ ಪೊಲೀಸ್ ವರಿಷ್ಟ್ಠಾಧಿಕಾರಿ ಜಿ.ರಾಧಿಕಾ, ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಡಿ. ಕುಮಾರಸ್ವಾಮಿ ಪ್ರಾಸ್ತಾವಿಕನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಗತಿಪರ ಚಿಂತಕರಾದ ಸಿ.ಕೆ. ಮಹೇಶ್‌ವಹಿಸಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷಪ್ಪ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡಗೆರೆ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹೊಸದುರ್ಗ ತಾಲೂಕು ಅಧ್ಯಕ್ಷ ಯೋಗೀಶ್ ಮೇಟಿಕುರ್ಕೆ, ಹಾಗೂ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದೇ ವೇಳೆ ಸ್ವಚ್ಛ ಸರ್ವೇಕ್ಷಣದಲ್ಲಿ ಪ್ರಶಸ್ತಿಯನ್ನು ಪಡೆದಿರುವಂತಹ ಚಿತ್ರದುರ್ಗ ನಗರಸಭೆ ಆಯುಕ್ತರಾದ ಹನುಮಂತರಾಜು ಹಾಗೂ ಹೊಳಲ್ಕೆರೆ ಪುರಸಭೆಯ ಮುಖ್ಯಾಧಿಕಾರಿಗಳಾದ ವಾಸಿಂ ಹಾಗೂ ಡಿಹೆಚ್‌ಓ ಡಾ. ಪಾಲಾಕ್ಷಪ್ಪ ಹಿರಿಯ ತಜ್ಞರಾದ ಡಾ. ಸತೀಶ್, ಜಿಲ್ಲಾ ಸರ್ವೇಕ್ಷಣ ಅಧಿಕಾರಿ ತುಳಸಿರಂಗನಾಥ್, ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ತರುವಲ್ಲಿ ಪ್ರಮುಖ ಪಾತ್ರವಹಿಸಿದ ಪೌರಕಾರ್ಮಿಕ ಮಂಜುನಾಥ್, ಅವರಿಗೆ ಸನ್ಮಾನ ಮಾಡಲಾಯಿತು.