ಬೆಂಗಳೂರು: ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಕೋಟಾದಡಿ ಓದುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಒಂದು ವರ್ಷದ ಗ್ರಾಮೀಣ ಸೇವೆ ಕಡ್ಡಾಯ ಎಂಬ ನಿಯಮವನ್ನು ಮಾರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಒಂದು ವರ್ಷದ ಬದಲು ಮೂರು ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆಯಂತೆ.

 ಈ ವರ್ಷದಿಂದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸರ್ಕಾರಿ ಕಾಲೇಜು ಅಥವಾ ಸರ್ಕಾರಿ ಕೋಟಾದಡಿ ಸೇರುವ ಅಭ್ಯರ್ಥಿಗಳು ಮೂರು ವರ್ಷಗಳ ಕಾಲ ಗ್ರಾಮೀಣ ಸೇವೆ ಅಥವಾ ಸರ್ಕಾರ ಸೂಚಿಸುವ ಪ್ರದೇಶದಲ್ಲಿ ಸೇವೆ ಸಲ್ಲಿಸಲು ರೆಡಿಯಾಗಿರಬೇಕು.

ಮೂರು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಪತ್ರ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ವೈದ್ಯಕೀಯ ಕಾಲೇಜುಗಳಿಗೂ ಇದನ್ನು ಕಳುಹಿಸಲಾಗುತ್ತದೆ. ಸರ್ಕಾರಿ ಕೋಟಾದಡಿ ಖಾಸಗಿ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಕಾಲೇಜಿನಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ ಪಡೆಯುವ ವಿದ್ಯಾರ್ಥಿಗಳು ಮೂರು ವರ್ಷ ಕಡ್ಡಾಯ ಸೇವೆಯ ಮುಚ್ಚಳಿಕೆ ಬರೆದುಕೊಡಲೇ ಬೇಕೆಂದು ಹೇಳಿದೆ.