ಸಿರಿಗೆರೆ: ನೀರು ಬಹಳ ಅಮೂಲ್ಯವಾದ ಜೀವದ್ರವ. ಅದನ್ನು ಯಾವುದೇ ಕಾರಣಕ್ಕೂ ಪೋಲು ಮಾಡದಂತೆ ಜಾಣ್ಮೆಯಿಂದ ಬಳಸಬೇಕು. ಆದ್ದರಿಂದ ನಮ್ಮ ಜನರು ನೀರು ಪೋಲು ಮಾಡುವುದಿಲ್ಲವೆಂದು ಕಂಕಣ ಕಟ್ಟಿ ಪ್ರತಿಜ್ಞೆ ಮಾಡಬೇಕು. ಇದು  ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಗ್ರಾಮೀಣ ಜನರಿಗೆ ಬೋಧಿಸಿದ ಹಿತನುಡಿ. ಓಬಳಾಪುರದಲ್ಲಿ ಬಹಳ ವಿಶೇಷವಾಗಿ ಮಾಡಿಸಿರುವ ಪೈಪ್‌ಲೈನ್ ಹೊಂದಿಸಿ ನೀರು ಬರುವ ಹಾಗೆ ಮಾಡಿರುವುದಕ್ಕೆ  ಸಂತಸ ತಂದಿದೆ. ಎಂದು ಅವರು ಶ್ಲಾಘಿಸಿದರು.
ಸೂಳೆಕೆರೆಯಿಂದ ಸಿರಿಗರೆ ಸುತ್ತಮುತ್ತಲ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜಾಗುತ್ತಿರುವ ಸಂದರ್ಭದಲ್ಲಿ ಶ್ರೀಗಳವರು ಸೀಗೆಹಳ್ಳಿ, ಹೊಸರಂಗಾಪುರ, ಅಳಗವಾಡಿ, ಓಬಳಾಪುರ, ಹಳುವುದರ ಹಟ್ಟಿ, ಹಳವುದರ ಈ ಹಳ್ಳಿಗಳಗೆ ಯುಗಾದಿಯ ದಿನವಾದ ಬುಧವಾರ ಭೇಟಿ ನೀಡಿದರು.  ಬರಗಾಲದ ಛಾಯೆ ಆವರಿಸಿರುವ ಪ್ರಸ್ತುತ ಸಂದರ್ಭದಲ್ಲಿ ತಮ್ಮ ಆಲೋಚನೆಗಳಿಗೆ ಸ್ಪಂದಿಸಿ ಅನೇಕ ಯೋಜನೆಗಳನ್ನು ಸರಕಾರಗಳು ಕಾರ್ಯರೂಪಕ್ಕೆ ತಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು ಮಳೆ ಬರುಬಹುದೆಂಬ ನಿರೀಕ್ಷೆ ಇದ್ದರೂ ಹವಾಮಾನ ಇಲಾಖೆಯು ವ್ಯತಿರಿಕ್ತವಾದ ವರದಿಗಳನ್ನು ನೀಡುತ್ತಿರುವುದು ಆತಂಕವನ್ನು ಹುಟ್ಟಿಸಿದೆ ಎಂದರು. ಬರದ ಬಿಸಿ ಮುಂದಿನ ವರ್ಷವೂ ತಟ್ಟಿ ಜನರು ಗುಳೆಹೋಗುವ ದುರ್ಭರ ಪ್ರಸಂಗ ಬಂದೀತೆಂಬ ಭಯ ಈಗ ಕಾಡುತ್ತಿದೆ. ಶಾಂತಿವನದ ಡ್ಯಾಮನ್ನು ಆಳಪಡಿಸಲಾಗಿದ್ದು ಅದರ ಧಾರಣ ಸಾಮರ್ಥ್ಯ ಈಗ ಹೆಚ್ಚಾಗಿದೆ. ಇದರಿಂದ ಮುಂಬರುವ ವರ್ಷಗಳಲ್ಲಿ ಅಂತರ್ಜಲ ಮಟ್ಟ ಇನ್ನೂ ಸುಧಾರಿಸಿ ರೈತರ ಬೋರ್‌ವೆಲ್‌ಗಳು ಉತ್ತಮಗೊಳ್ಳಬಹುದೆಂಬ ಆಶಾಭಾವವನ್ನು ವಕ್ತಪಡಿಸಿದ ಅವರು ಸರಕಾರವು ಈ ವರ್ಷ ಬರಪರಿಹಾರದ ಮೊತ್ತವನ್ನು ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆಯನ್ನ ಮಾಡುವ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ನಿವಾರಿಸಿ ರೈತರ ಖಾತೆಗಳಿಗೆ ಅಚ್ಚುಕಟ್ಟಾಗಿ ಜಮೆ ಮಾಡಿರುವುದು ತಮಗೆ ಖುಷಿ ತಂದಿದೆ. ಸೆಪ್ಟೆಂಬರ್ ೨೪ ರಂದು ಹಿರಿಯ ಗುರುಗಳವರ ಶ್ರದ್ಧಾಂಜಲಿ ಸಂದರ್ಭದಲ್ಲಿ ಬೆಳೆ ಪರಿಹಾರ ಕುರಿತ ಸಂವಾದ ಹೀಗೆ ಫಲಕಾರಿಯಾಗಿರುವುದು ಶ್ಲಾಘನೀಯವಾಗಿದೆ ಎಂದವರು ನುಡಿದರು.
ರೈತರ ಸಹಾಯಕ್ಕಾಗಿ ರೂಪಿಸಿರುವ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಕವಡೆ ಕಾಸಿನ ಪ್ರಯೋಜನವೂ ಇಲ್ಲದಿರುವ ವಿಷಯವನ್ನು ಪ್ರಧಾನ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಈಗ ಚಾಲನೆಗೊಂಡಿದ್ದು ಅದು ರೈತಸ್ನೇಹಿಯಾಗಿ ರೂಪಾಂತರಗೊಳ್ಳುವ ನಿರೀಕ್ಷೆಯನ್ನು ತಾವು ಇಟ್ಟುಕೊಂಡಿರುವುದಾಗಿ ಹಳ್ಳಿಯ ಸಭೆಗಳಲ್ಲಿ ಶ್ರೀಗಳವರು ತಿಳಿಸಿದರು.
ಶ್ರೀಗಳವರ ಈ ಗ್ರಾಮ ಸಂಚಾರದ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯ  ಕರಿಬಸಯ್ಯ, ಗ್ರಾಮಪಂಚಾಯಿತಿ ಅಧ್ಯಕ್ಷೆ ಸುಮಾ ನಾಗರಾಜು, ಸದಸ್ಯರು, ಗ್ರಾಮಗಳ ಜನರು ಸಹಕರಿಸಿದ್ದು ವಿಶೇಷವಾಗಿತ್ತು.