ಚಿತ್ರದುರ್ಗ: ನಿಗಮ ಮಂಡಳಿಗಳಿಗೆ ನೇಮಕ ಮಾಡುವಾಗ ಪಕ್ಷಕ್ಕೆ ದುಡಿದವರಿಗೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಿಗೆ ಅವಕಾಶ ಕೊಡಿ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎ.ಸೇತೂರಾಂ ಕಾಂಗ್ರೆಸ್ ವರಿಷ್ಠರುಗಳಲ್ಲಿ ಮನವಿ ಮಾಡಿದ್ದಾರೆ.

ಕೋಮುವಾದಿ ಬಿಜೆಪಿ.ಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಮತ್ತು ಜೆಡಿಎಸ್.ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಸರಿಯಾಗಿದೆ. ಆದರೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಲ್ಲರಿಗೂ ಸಚಿವ ಸ್ಥಾನ ಸಿಗಬೇಕಾದರೆ ಕಷ್ಠ. ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಇವರುಗಳು ಒಗ್ಗಟ್ಟಾಗಿದ್ದು, ಕಾಂಗ್ರೆಸ್ ಯುವನೇತಾರ ರಾಹುಲ್‌ಗಾಂಧಿ ಹಾಗೂ ಸೋನಿಯಾಗಾಂಧಿರವರ ಕೈಬಲಪಡಿಸಬೇಕಿದೆ. ಜೆಡಿಎಸ್.ನ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ಅಧಿಕಾರಕ್ಕಿಂತಲೂ ಮುಖ್ಯವಾಗಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗಿದೆ ಎಂದು ನಾಯಕರುಗಳಲ್ಲಿ ವಿನಂತಿಸಿದ್ದಾರೆ.

ಏಳೆಂಟು ಬಾರಿ ಗೆದ್ದಿರುವವರೆ ಅಧಿಕಾರದ ಹಿಂದೆ ಬೀಳದೆ ಕೆಲವೊಮ್ಮೆ ಪಕ್ಷದ ಹಿತದೃಷ್ಠಿಯಿಂದ ಎಲ್ಲವನ್ನು ತ್ಯಾಗ ಮಾಡಬೇಕಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶಕ್ತಿ ಪ್ರದರ್ಶಿಸಿದಾಗ ಮಾತ್ರ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯ. ಈಗಾಗಲೆ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಾಕಿ ಇರುವ ಐದು ಸ್ಥಾನಗಳಿಗೆ ಹದಿನೈದು ಮಂದಿ ಪೈಪೋಟಿ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಹೊಂದಾಣಿಕೆಯಿಂದ ಇರುವುದಷ್ಠೆ ಮುಖ್ಯವಲ್ಲ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರುಗಳ ಕೈಬಲಪಡಿಸಬೇಕಿದೆ ಎಂದು ಎಂ.ಎ.ಸೇತೂರಾಂ ಕೋರಿದ್ದಾರೆ.