ಚಿತ್ರದುರ್ಗ: ಇದೇ ತಿಂಗಳ ಹದಿನೆಂಟರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂರು ಜಿಲ್ಲೆಗಳ ಬಿಜೆಪಿ.ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ರ್ಯಾಲಿಗೆ ದೇಶದ ಪ್ರಧಾನಿ ನರೇಂದ್ರಮೋದಿರವರು ಏ.9 ರ ಇಂದು ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನಕ್ಕೆ ಆಗಮಿಸುತ್ತಿರುವುದರಿಂದ ಮಧ್ಯಾಹ್ನ 12 ಗಂಟೆ ಒಳಗಾಗಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಅಭಿಮಾನಿಗಳು ಮೈದಾನದೊಳಗೆ ಆಗಮಿಸಿ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಲೋಕಸಭೆ ಚುನಾವಣೆ ಉಸ್ತುವಾರಿ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಮನವಿ ಮಾಡಿದರು.

ರ್ಯಾಲಿ ನಡೆಯುವ ಸ್ಥಳದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎ.ಹೆಚ್.ಶಿವಯೋಗಿಸ್ವಾಮಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಲೋಕಸಭಾ ಕ್ಷೇತ್ರಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪ್ರಧಾನಿ ಮೋದಿರವರ ಜೊತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಲ್.ನಾರಾಯಣಸ್ವಾಮಿ, ದಾವಣಗೆರೆಯ ಜಿ.ಎಂ.ಸಿದ್ದೇಶ್ವರ್, ತುಮಕೂರಿನ ಜಿ.ಎಸ್.ಬಸವರಾಜ್, ಲೋಕಸಭೆ ಚುನಾವಣೆಯ ರಾಜ್ಯ ಉಸ್ತುವಾರಿ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಕೋಟಶ್ರೀನಿವಾಸ್ ಪೂಜಾರಿ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಡಿ.ಹೆಚ್.ಶಂಕರಮೂರ್ತಿ, ಮಾಜಿ ಸಚಿವ ಗೋವಿಂದಕಾರಜೋಳ, ಮೂರು ಜಿಲ್ಲೆಗಳ ಶಾಸಕರು, ವಿಧಾನಪರಿಷತ್ ಸದಸ್ಯರು ಮಾತ್ರ ವೇದಿಕೆಯಲ್ಲಿರುತ್ತಾರೆ. ಉಳಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಮೂರು ಜಿಲ್ಲೆಯ ಬಿಜೆಪಿ.ಪದಾಧಿಕಾರಿಗಳಿಗೆ, ಮತ್ತೊಂದು ವೇದಿಕೆಯಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ಮೋದಿರವರು ಮಧ್ಯಾಹ್ನ 2 ಗಂಟೆಗೆ ಚಿತ್ರದುರ್ಗಕ್ಕೆ ಆಗಮಿಸುತ್ತಾರಾದರೂ ವೇದಿಕೆ ಕಾರ್ಯಕ್ರಮ ಮಧ್ಯಾಹ್ನ ಒಂದು ಗಂಟೆಯಿಂದಲೇ ಆರಂಭಗೊಳ್ಳಲಿದೆ. ಸಹಜವಾಗಿ ದಟ್ಟಣೆ ಜಾಸ್ತಿಯಾಗುವುದರಿಂದ ಮಧ್ಯಾಹ್ನ 12 ಗಂಟೆ ಒಳಗಾಗಿ ಪಕ್ಷದ ಕಾರ್ಯಕರ್ತರು, ಜನಸಾಮಾನ್ಯರು, ಅಭಿಮಾನಿಗಳು ರ್ಯಾಲಿ ನಡೆಯುವ ಮೈದಾನಕ್ಕೆ ಆಗಮಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ರ್ಯಾಲಿಯನ್ನು ಯಶಸ್ವಿಗೊಳಿಸುವಂತೆ ಡಾ.ಎ.ಹೆಚ್.ಶಿವಯೋಗಿಸ್ವಾಮಿ ವಿನಂತಿಸಿದರು.
ರ್ಯಾಲಿಯಲ್ಲಿ 24 ಸೆಕ್ಟರ್‍ಗಳನ್ನು ತೆರೆಯಲಾಗಿದ್ದು, ಸ್ವಯಂ ಸೇವಕರು ಎಲ್ಲಾ ಕಡೆ ಇರುತ್ತಾರೆ. ಯಾವುದೆ ರೀತಿಯ ಅವ್ಯವಸ್ಥೆಯಾಗದಂತೆ ಸಕಲ ಸಿದ್ದತೆಗಳನ್ನು ಮಾಡಲಾಗಿದೆ ಎಂದು ರ್ಯಾಲಿಯ ಕುರಿತು ವಿವರಿಸಿದರು.

ಬಿಜೆಪಿ.ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಏ.11 ರಂದು ಮಧ್ಯಾಹ್ನ ಮೂರು ಗಂಟೆಗೆ ಹೊಸದುರ್ಗದಲ್ಲಿ ಅಭ್ಯರ್ಥಿಗಳ ಪರ ಬಹಿರಂಗ ಭಾಷಣ ಮಾಡುವರು. ಸಂಜೆ 5 ಕ್ಕೆ ಚಳ್ಳಕೆರೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಮತಯಾಚಿಸುವರು.
ಮಾಜಿ ಸಚಿವ ಗೋವಿಂದಕಾರಜೋಳ, ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ರತ್ನಮ್ಮ, ವಕ್ತಾರ ನಾಗರಾಜ್‍ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.