ಚಿತ್ರದುರ್ಗ: ಭಾರತೀಯ ವಾಯುಪಡೆಯಲ್ಲಿನ ಗ್ರೂಪ್ ವೈ ಮೆಡಿಕಲ್ ಅಸಿಸ್ಟೆಂಟ್ ವಿಭಾಗದ ಹುದ್ದೆಗಳಿಗೆ ಮಾರ್ಚ್ 18, 19 ರಂದು ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಬೃಹತ್ ನೇಮಕಾತಿ ರ್ಯಾಲಿ ನಡೆಯಲಿದೆ ಎಂದು ಬೆಂಗಳೂರಿನ ಏರ್‍ಮೆನ್ ಸೆಲೆಕ್ಷನ್ ಸೆಂಟರ್‍ನ ವಿಂಗ್ ಕಮಾಂಡರ್ ಎಸ್.ಕೆ.ಅರೋರ ತಿಳಿಸಿದರು.
ಅವರು (ಮಾ.16) ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಚಿತ್ರದುರ್ಗ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಯುವಕರಿಗೆ ಉದ್ಯೋಗಾವಕಾಶ ಸಿಗಲೆಂದು ಇಲ್ಲಿಯೇ ರ್ಯಾಲಿಯನ್ನು ಏರ್ಪಡಿಸಲಾಗಿದೆ. ಮಾ.18 ರಂದು ಬೆಳಗ್ಗೆಯಿಂದಲೇ ದೈಹಿಕ ಹಾಗೂ ಲಿಖಿತ ಪರೀಕ್ಷೆಗಳು ನಡೆಯಲಿವೆ. ಮಾ.19 ರಂದು ಅಡಾಪ್ಟೆಬಿಲಿಟಿ ಟೆಸ್ಟ್ 1 ಮತ್ತು 2 ನಡೆಯಲಿದೆ.
ಮಾ.18 ರಂದು ಹೊಸ ವರ್ಷ ಯುಗಾದಿ ಹಬ್ಬವಿದ್ದರೂ ಜಿಲ್ಲೆಯ ಯುವಕರು ಹಾಗೂ ಉದ್ಯೋಗಾಕಾಂಕ್ಷಿಗಳು ರ್ಯಾಲಿಯಲ್ಲಿ ಭಾಗವಹಿಸುತ್ತಾರೆಂಬ ಭರವಸೆ ಇದೆ. ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಆಗಮಿಸಲಿದ್ದಾರೆ. ಅರ್ಹರಾದ ಎಲ್ಲರಿಗೂ ಉದ್ಯೋಗಾವಕಾಶವನ್ನು ಕಲ್ಪಿಸಲಾಗುತ್ತದೆ ಎಂದರು.
1998 ರ ಜನವರಿ 12 ರಿಂದ 2002 ರ ಜನವರಿ 2 ರ ನಡುವೆ ಜನಿಸಿದ ಕರ್ನಾಟಕ ರಾಜ್ಯದ 152.2 ಸೆ.ಮೀ ಎತ್ತರದ ಪುರುಷ ಅವಿವಾಹಿತ, ಇಂಟರ್ ಮೀಡಿಯಟ್, ಪಿ.ಯು.ಸಿ, ತತ್ಸಮಾನ ಪರೀಕ್ಷೆಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯಗಳಲ್ಲಿ ಕನಿಷ್ಠ ಶೇ.10 ಹಾಗೂ ಇಂಗ್ಲೀಷ್‍ನಲ್ಲಿ ಶೇ.50 ರಷ್ಟು ಅಂಕ ಪಡೆದು ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ರ್ಯಾಲಿಯಲ್ಲಿ ಭಾಗವಹಿಸಲು ತಿಳಿಸಿದರು.
ಮೂಲ ಅಂಕಪಟ್ಟಿ, ಎಸ್.ಎಸ್.ಎಲ್.ಸಿ. ಪ್ರಮಾಣಪತ್ರ, ಪಿ.ಯು.ಸಿ. ಉತ್ತೀರ್ಣರಾದ ಪ್ರಮಾಣಪತ್ರ, ಇತರ ಎಲ್ಲಾ ಶೈಕ್ಷಣಿಕ ಪ್ರಮಾಣ ಪತ್ರಗಳ ನಾಲ್ಕು ಸ್ವಯಂ ದೃಢೀಕೃತ ಪ್ರತಿಗಳು, ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಬಣ್ಣದ 8 ಭಾವಚಿತ್ರಗಳೊಂದಿಗೆ ಬೆ.6 ಗಂಟೆಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗೆ ಭಾರತೀಯ ವಾಯಪಡೆ ವೆಬ್‍ಸೈಟ್ www.airmenselection.cdac.in ಅಥವಾ 7 ಏರ್‍ಮೆನ್ ಸೆಲೆಕ್ಷನ್ ಸೆಂಟರ್, ನಂ.1, ಕಬ್ಬನ್ ರಸ್ತೆ, ಬೆಂಗಳೂರು, ದೂರವಾಣಿ ನಂ.080-25592199, ಇ-ಮೇಲ್ ಅಡ್ರಸ್ co.7asc-ka@gov.in ನಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು. ವಾಯುಪಡೆ ಅಧಿಕಾರಿ ಮಿಶ್ರ ಉಪಸ್ಥಿತರಿದ್ದರು.