ಚಿತ್ರದುರ್ಗ: ಭದ್ರಾಮೇಲ್ದಂಡೆ ಕಾಮಗಾರಿ ಯೋಜನೆಯಡಿ ಅಜ್ಜಂಪುರ ಬಳಿ ರೈಲ್ವೆ ಕ್ರಾಸಿಂಗ್ ಹತ್ತಿರ ಹಿರಿಯೂರು ವಾಣಿವಿಲಾಸ ಸಾಗರಕ್ಕೆ ನೀರು ಹಾಯಿಸುವ ವೈ ಜಂಕ್ಷನ್ ನಾಲಾ ಕಾಮಗಾರಿಯ ಸೇತುವೆ ಕುಸಿದಿರುವುದನ್ನು ಚಿತ್ರದುರ್ಗ ಲೋಕಸಭಾ ಸದಸ್ಯ ಎ.ನಾರಾಯಣಸ್ವಾಮಿ ವೀಕ್ಷಿಸಿ ಇಂಜಿನಿಯರ್‌ಗಳ ಜೊತೆ ಚರ್ಚಿಸಿ ಎರಡುವರೆ ಮೀಟರ್ ಅಗಲದ ಪೈಪ್‌ಗಳನ್ನು ಅಳವಡಿಸಿ ಕೂಡಲೆ ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಬೇಕೆಂದು ಸೂಚಿಸಿದರು.

ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದರಿಂದ ಯಾವುದೆ ಕಾರಣಕ್ಕೂ ಕಾಮಗಾರಿಯನ್ನು ನಿಲ್ಲಿಸುವುದು ಬೇಡ. ಪರ್ಯಾಯವಾಗಿ ಸಮರೋಪಾದಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಅನ್ನದಾತ ರೈತರಿಗೆ ನೀರು ಹರಿಸಬೇಕಾಗಿದೆ ಎಂದು ಹೇಳಿದರು.

ತೋಟಗಾರಿಕೆ ಬೆಳೆಗಳಿಗೆ ಹೆಸರುವಾಸಿಯಾಗಿರುವ ಹಿರಿಯೂರು ತಾಲೂಕಿನ ರೈತರು ಮಳೆಯಿಲ್ಲದೆ ಕಂಗಾಲಾಗಿರುವುದರಿಂದ ಭದ್ರಾಮೇಲ್ದಂಡೆ ಯೋಜನೆಯ ನೀರು ಹರಿಸುವುದೊಂದು ಉಳಿದಿರುವ ಏಕೈಕ ಮಾರ್ಗ. ಹಾಗಾಗಿ ಕಾಮಗಾರಿಯನ್ನು ಚುರುಕುಗೊಳಿಸಿ ನೀರು ಹಾಯಿಸಬೇಕಾಗಿದೆ ಎಂದು ರೈತರ ಬಗ್ಗೆ ತಮಗಿರುವ ಕಾಳಜಿಯನ್ನು ವ್ಯಕ್ತಪಡಿಸಿದರು.

ಮುಖ್ಯ ಇಂಜಿನಿಯರ್ ಪಾಳೆಗಾರ್, ಬಿಜೆಪಿ.ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್, ಸತ್ಯನಾರಾಯಣ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.