ಚಿತ್ರದುರ್ಗ: ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆಯ ಅಂಗವಾಗಿ ಇದೇ ಮಾ.22 ರಂದು ದೊಡ್ಡ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಜಾತ್ರೆಯಲ್ಲಿ ಭಕ್ತಾದಿಗಳಿಗೆ ನೀರಿನ ಸಮಸ್ಯೆ ಉಂಟಾಗದಂತೆ 70 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 5 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಭಕ್ತಾದಿಗಳ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮತ್ತು ಭದ್ರತೆ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಾತ್ರೆಯಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದು, ದೇವಾಲಯದ ಜಾತ್ರಾ ಪ್ರದೇಶದಲ್ಲಿ 70 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುವ ಎಲ್ಲ ಭಕ್ತಾದಿಗಳಿಗೂ ಸಹ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಜಾತ್ರೆಯಲ್ಲಿ ಮಾ.20 ರಿಂದ 25 ರವರೆಗೆ ದೇವಾಲಯದ ಪ್ರಾಂಗಣದಲ್ಲಿ ಭಕ್ತರು ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡುವವರು, ಆರೋಗ್ಯ ಇಲಾಖೆ ಮತ್ತು ದೇವಾಲಯದ ಕಾರ್ಯನಿರ್ವಹಣಾಧಿಕಾರಿಗಳಿಂದ ಅನುಮತಿ ಪಡೆದು ವಿತರಿಸಬೇಕು. ಜಾತ್ರಾ ಸಮಯದಲ್ಲಿ ದೇವಾಲಯದ ಸುತ್ತ ಮುತ್ತ ಆವರಣದಲ್ಲಿ ಪ್ರಾಣಿ ಬಲಿ ಮಾಡುವುದನ್ನು ನಿಷೇಧಿಸಿದೆ. ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಮಾಡದೆ, ಭಕ್ತರು ಕಾಗದ ಮತ್ತು ಬಟ್ಟೆ ಚೀಲಗಳನ್ನು ಬಳಸಬೇಕು. ಭಕ್ತರು ತ್ಯಾಜ್ಯ ವಸ್ತುಗಳನ್ನು ನಿಗದಿ ಮಾಡಿದ ಕಸದ ಪುಟ್ಟಿಗಳಲ್ಲಿ ಹಾಕಬೇಕು ಎಂದು ಹೇಳಿದರು. ಜಾತ್ರೆಗೆ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಬರುವ ಜನರಿಗೆ ಅಗತ್ಯವಿರುವಷ್ಟು ಕೆಸ್ಸಾರ್ಟಿಸಿ ಬಸ್ಸುಗಳ ವ್ಯವಸ್ಥೆಯನ್ನು ಜಿಲ್ಲಾ ಕೆಸ್ಸಾರ್ಟಿಸಿ ವಿಭಾಗವು ಕಲ್ಪಿಸಿದೆ. ಜಾತ್ರೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅವರಿಗೆ ವಾಹನಗಳಿಂದ ಕಿರಿಕಿರಿ ಮತ್ತು ರಸ್ತೆಗಳು ಜಾಮ್ ಆಗದಂತೆ ನಾಯಕನಹಟ್ಟಿ ಕ್ಷೇತ್ರ ವ್ಯಾಪ್ತಿಗೆ ಸೇರುವ ಐದು ರಸ್ತೆಗಳಲ್ಲಿ ಬಸ್ಸು, ಕಾರು ಮತ್ತು ಮೋಟರ್ ಸೈಕಲ್‍ಗಳಿಗೆ ಪ್ರತ್ಯೇಕವಾದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ನಿಗದಿತ ಸ್ಥಳಗಳಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಜಾತ್ರೆಯಲ್ಲಿ ಸಾರ್ವಜನಿಕರ ಭದ್ರತೆ ಮತ್ತು ಅನುಕೂಲಕ್ಕಾಗಿ ಹೆಚ್ಚುವರಿಯಾಗಿ ಸೂಕ್ತ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.

ಎಲ್‍ಇಡಿ ಸ್ಕ್ರೀನ್ ವ್ಯವಸ್ಥೆ : ವಿಶೇಷವಾಗಿ ಮಾ.22 ರಂದು ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ನೋಡಲು ಜನರಲ್ಲಿ ನೂಕು ನುಗ್ಗಲು ಆಗದಂತೆ ರಥೋತ್ಸವ ವೀಕ್ಷಣೆಗೆ ಭಕ್ತರಿಗಾಗಿ ಎಲ್‍ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತಾಧಿಗಳ ರಥೋತ್ಸವವನ್ನು ದೂರದಲ್ಲಿ ನಿಂತು ನೋಡಬಹುದಾಗಿದೆ.

ಸಹಾಯವಾಣಿ: ಜಾತ್ರೆಗೆ ಸಂಬಂದಿಸಿದಂತೆ ಮೂಲ ಭೂತ ಸೌಕರ್ಯಗಳು ಮತ್ತು ಇತರೆ ತೊಂದರೆಗಳು ಉಂಟಾದಲ್ಲಿ ಸಹಾಯವಾಣಿ ಸಂಖ್ಯೆ :9591655223, 9449770255, 9480803100 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.