ಬೆಂಗಳೂರು : ಅಂಬರೀಶ್ ಕಳೆದುಕೊಂಡಾಗ ನನಗೆ ಧೈರ್ಯ ತುಂಬಿದ್ದು ಮಂಡ್ಯದ ಜನತೆ. ಅಂಬರೀಶ್ ಇಲ್ಲ ಎಂದು ನೀವು ಯೋಚಿಸಬೇಡಿ. ನಾವು ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳಿದವರೇ ನನ್ನ ಮಂಡ್ಯದ ಜನತೆ.ಇಂತಹ ಮಂಡ್ಯ ಜನರ ಸೇವೆಯನ್ನು ಮಾಡಬೇಕು. ಮಂಡ್ಯ ಜನತೆಯ ಸೇವೆಯನ್ನು ಅಂಬರೀಶ್ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಇದೇ ಮಾತನ್ನು ಅನೇಕರು ಹೇಳಿ, ಆ ಕೆಲಸವನ್ನು ಮುಂದುವರೆಸುವಂತೆ ತಿಳಿಸಿದ್ದಾರೆ ಹಾಗಾಗಿ ನಾನು ಯಾವಪಕ್ಷದಿಂದ ಸ್ಪರ್ಧೆಮಾಡುವುದಿಲ್ಲ ಸ್ವತಂತ್ರ ಅಭ್ಯರ್ಥಿ ಆಗಿ ಕಣದಲ್ಲಿರುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಶಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಜಕಾರಣಿ ಅಲ್ಲ. ರಾಜಕಾರಣಿ ಆಗಬೇಕು ಎಂಬ ಆಸೆಯೂ ನನಗೆ ಇಲ್ಲ. ಕಳೆದ ಎರಡು ಮೂರು ವಾರಗಳಿಂದ ಮಂಡ್ಯ ಜಿಲ್ಲೆಯ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಜನರು ಹೇಳಿದ್ದಾರೆ. ನಾವು ಯಾವುದೇ ಕಾರಣಕ್ಕೂ ಅಂಬರೀಶ್ ಅಣ್ಣನನ್ನು ಮಂಡ್ಯದಿಂದ ಬಿಟ್ಟುಕೊಡುವುದಿಲ್ಲ. ನೀವೆ ಅವರ ಹೆಸರನ್ನು, ಪ್ರೀತಿ ವಿಶ್ವಾಸವನ್ನು ಮುಂದುವರೆಸಿಕೊಂಡು ಹೋಗುವಂತೆ ಬೇಡಿಕೆ ಇಟ್ಟಿದ್ದಾರೆ.

ಇದೇ ವಿಷವಾಗಿ ನನಗೆ ಆಪ್ತರನ್ನು, ಸ್ನೇಹಿತರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ಅವರೆಲ್ಲರೂ ಹೇಳಿದ್ದು ಒಂದೇ ಮಾತು. ನಿಮ್ಮ ಇಷ್ಟದಂತೆ ನೀವು ನಡೆಯಿರಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಹೇಳಿದರು. ಹೀಗಾಗಿ ಅವರೆಲ್ಲರ ಮಾತನ್ನು, ಮಂಡ್ಯ ಜನತೆಯ ಮಾತನ್ನು ಕೇಳಿ ನಾನು ಮಂಡ್ಯದಿಂದ ನಿಂತುಕೊಳ್ಳಲಿಲ್ಲ ಅಂದರೇ, ಇದು ಅವರ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ ಎಂದು ಹೇಳಿದರು.