ದಾವಣಗೆರೆ: ಜಗಳೂರು ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ನಡೆದಿದ್ದ ಕೋಟ್ಯಂತರ ರೂಪಾಯಿ ಹಗರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಪಿಡಿಒ ಹಾಗೂ ಒಬ್ಬ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ.

ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ನಡೆದಿದ್ದ ಅವ್ಯವಹಾರಗಳ ಬಗ್ಗೆ ರಾಜ್ಯ ಮಟ್ಟದ ತನಿಖಾ ತಂಡಗಳು ನೀಡಿದ ವರದಿ ಆಧರಿಸಿ ಒಂಬತ್ತು ಪಿಡಿಒ ಹಾಗೂ ಒಬ್ಬ ಕಾರ್ಯದರ್ಶಿಯನ್ನು ಅಮಾನತುಗೊಳಿಸಿ ಬುಧವಾರ ಆದೇಶಿಸಿದ್ದೇನೆ. ಜೊತೆಗೆ ಐವರು ತಾಂತ್ರಿಕ ಸಹಾಯಕರು, 10 ಡಾಟಾ ಎಂಟ್ರಿ ಆಪರೇಟರ್‌ಗಳನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ

ಏಳು ಪಿಡಿಒ, ಆರು ಡಾಟಾ ಎಂಟ್ರಿ ಆಪರೇಟರ್‌ಗಳು ಸೇರಿ 16 ಜನರಿಗೆ ಎಚ್ಚರಿಕೆಯ ನೋಟಿಸ್‌ ನೀಡಲಾಗಿದೆ. ₹ 5.01 ಲಕ್ಷ ದಂಡ ವಿಧಿಸಲಾಗಿದೆ’ ಎಂದು ತಿಳಿಸಿದರು.

ಅಮಾನತ್ತುಗೊಂಡವರು ಜಗಳೂರು ತಾಲ್ಲೂಕಿನ ದೇವಿಕೆರೆ, ದಿದ್ದಿಗಿ, ದೊಣೆಹಳ್ಳಿ, ಗುರುಸಿದ್ದಾಪುರ, ಗುತ್ತಿದುರ್ಗ, ಹನುಮಂತಾಪುರ, ಹಿರೇಮಲ್ಲನಹೊಳೆ, ಬಸವನಕೋಟೆ, ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿಗಳಲ್ಲಿ 2018-19 ಹಾಗೂ 2019-20ನೇ ಸಾಲಿನಲ್ಲಿ ನರೇಗಾ ಕಾಮಗಾರಿಯಲ್ಲಿನ ನಡೆಸಿದ ಹಗರಣಗಳಿಗೆ ಸಂಬಂಧಿಸಿದಂತೆ ಆ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂಬತ್ತು ಪಿಡಿಒ ಹಾಗೂ ಒಬ್ಬ ಕಾರ್ಯದರ್ಶಿ ಅಮಾನತುಗೊಂಡಿದ್ದಾರೆ