ಚಿತ್ರದುರ್ಗ: ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವಕರಿಗೆ ವಚನ ನೀಡಿ ಕೊನೆಗೆ ಪಕೋಡ ಮಾರಿ ಜೀವನ ಮಾಡಿ ಎಂದು ಯುಕವರನ್ನು ಅವಮಾನಿಸಿರುವ ದೇಶದ ಪ್ರಧಾನಿ ನರೇಂದ್ರಮೋದಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಹೆಚ್.ಆಂಜನೇಯ ಪ್ರಧಾನಿ ಟೀಕೆಗೆ ತಿರುಗೇಟು ನೀಡಿದರು.
ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ. ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಭಾನುವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಮೋದಿ ಬಹಿರಂಗ ಸಭೆಯಲ್ಲಿ ಯಾವುದೇ ಆಧಾರವಿಲ್ಲದೆ ನನ್ನನ್ನು ತೇಜೋವಧೆ ಮಾಡಿರುವುದು ಅವರ ಸ್ಥಾನಕ್ಕೆ ತಕ್ಕುದಲ್ಲ. ಚುನಾವಣೆ ಸಂದರ್ಭದಲ್ಲಿ ಈ ರೀತಿ ಅಪಪ್ರಚಾರ ಮಾಡಿದರೆ ಕ್ಷೇತ್ರದ ಜನತೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಐದು ವರ್ಷಗಳ ಅಧಿಕಾರವಧಿಯಲ್ಲಿ ಹೊಳಲ್ಕೆರೆ ಕ್ಷೇತ್ರದಲ್ಲಿ ಸಾಕಷ್ಠು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಅವುಗಳೇ ಈ ಚುನಾವಣೆಯಲ್ಲಿ ನನಗೆ ಶ್ರೀರಕ್ಷೆಯಾಗಲಿದೆ ಎಂದು ಹೇಳಿದರು.
ಚುನಾವಣೆಗೆ ಮುನ್ನ ವಿದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬನ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುತ್ತೇನೆ ಎಂದು ಹೇಳಿದ್ದನ್ನು ಮೋದಿ ಮರೆತಂತಿದೆ. ಕೇವಲ ಜಾಹಿರಾತು ಭಾಷಣಗಳಿಂದ ಬಿಜೆಪಿ ಬದುಕಿದೆಯೇ ವಿನಃ ಸಾಧನೆಯಿಂದಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಐದು ವರ್ಷಗಳ ಅವಧಿಯಲ್ಲಿ ನೀಡಿದ ಜನಪರ ಯೋಜನೆಗಳನ್ನು ಕಂಡು ಸಹಿಸಿಕೊಳ್ಳಲು ಆಗದೆ ಸೋಲುವ ಹತಾಶೆಯಿಂದ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ ಎಂದು ವ್ಯಂಗ್ಯವಾಡಿದರು.
ಹಾಸಿಗೆ ದಿಂಬಿನಲ್ಲಿ ನಡೆದ ಹಗರಣವನ್ನು ಬಯಲಿಗೆ ಎಳೆದಿದ್ದು ನಾನೆ. ಒಂದು ವೇಳೆ ಲಂಚ ಪಡೆದಿದ್ದರೆ ನೇಣಿಗೇರಿಸಲಿ. ಸಿ.ಬಿ.ಐ. ತನಿಖೆ ನಡೆಸಲಿ, ನ್ಯಾಯಾಲಕ್ಕೆ ದೂರು ನೀಡಲಿ. ಇದ್ಯಾವುದನ್ನು ಮಾಡಲು ಕೈಲಾಗದ ಬಿಜೆಪಿ.ಯವರು ವಿನಾ ಕಾರಣ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಹೊಳಲ್ಕೆರೆ ತಾಲೂಕಿನಾದ್ಯಂತ ಬಡವರಿಗೆ ಬೋರ್‍ವೆಲ್‍ಗಳನ್ನು ಕೊರೆಸಿದ್ದೇನೆ. ರೈತರ ಸಾಲ ಮನ್ನ ಮಾಡಲಾಗಿದೆ ಎಂದು ಹೇಳಿದರು.
ಸಂಸದ ಬಿ.ಎನ್.ಚಂದ್ರಪ್ಪ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ, ಎ.ಐ.ಸಿ.ಸಿ.ಯಿಂದ ಚುನಾವಣಾ ವೀಕ್ಷಕರಾಗಿ ಜಿಲ್ಲೆಗೆ ಆಗಮಿಸಿರುವ ತುಳಸಿರೆಡ್ಡಿ, ಡಿ.ಬಸವರಾಜ್, ಎ.ಪಿ.ಎಂ.ಸಿ.ಸದಸ್ಯ ತಿಪ್ಪೇಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.