ಬೆಂಗಳೂರು: ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಮೇಲೆ ಯಾವುದೇ ರೀತಿಯ ಒತ್ತಡವೂ ಇಲ್ಲ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಸಚಿವ ಸ್ಥಾನಕ್ಕೆ ಸಮಾನಾಂತರ ಸ್ಥಾನ ನೀಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಆದರೆ, ನನ್ನ ರಾಜೀನಾಮೆಯನ್ನು ಯಾವ ಕಾರಣಕ್ಕಾಗಿ ಪಡೆಯಲಾಗುತ್ತಿದೆ ಎಂಬ ಬಗ್ಗೆ ಇನ್ನೂ ನನಗೆ ಸ್ಪಷ್ಟತೆ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರ ಮಾತಿಗೆ ಬೆಲೆ ಕೊಟ್ಟು ನನ್ನ ಸಚಿವ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದೇನೆ. ನಾನು ನನ್ನ ಸ್ವಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ ಎಂದು ನಾಗೇಶ್ ತಿಳಿಸಿದರು.
ನಾನು ಬೇರೆಯವರ ಬಗ್ಗೆ ಮಾತನಾಡುವುದಿಲ್ಲ. ನನ್ನ ಬಗ್ಗೆ ಯಾವುದೇ ದೂರುಗಳಿಲ್ಲ. ನಾನು ಅಬಕಾರಿ ಇಲಾಖೆಯಲ್ಲಿ ಸಾಕಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ನಾನು ಯಾವುದೇ ರೀತಿಯಲ್ಲೂ ತಪ್ಪು ಮಾಡಿಲ್ಲ ಎಂದು ಬುಧವಾರ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಗೇಶ್ ಅವರು ಸ್ಪಷ್ಟನೆ ನೀಡಿದರು.