ಚಿತ್ರದುರ್ಗ: ನಗರ ದೇವತೆ ಏಕನಾಥೇಶ್ವರಿಯ ಭವ್ಯವಾದ ಮೆರವಣಿಗೆ ಶುಕ್ರವಾರ ನಗರದ ರಾಜಬೀದಿಗಳಲ್ಲಿ ಸಾಗಿತು.

ಮಲ್ಲಿಗೆ, ಕನಕಾಂಬರ, ಸೇವಂತಿಗೆ, ಸುಗಂಧರಾಜ, ಹಸಿರುಪತ್ರೆ ಹಾಗೂ ಬೃಹಧಾಕಾರದ ಹೂಮಾಲೆಗಳಿಂದ ಸಿಂಗರಿಸಲಾಗಿದ್ದ ಏಕನಾಥೇಶ್ವರಿ ಅಮ್ಮನನ್ನು ಎತ್ತಿನಬಂಡಿಯಲ್ಲಿ ಮೆರವಣಿಗೆ ಕೊಂಡೊಯ್ಯಲಾಯಿತು.
ಡೊಳ್ಳು, ತಮಟೆ, ಉರುಮೆ, ಕಹಳೆ ಸದ್ದಿಗೆ ನೂರಾರು ಯುವಕರು ಹಾಗೂ ಭಕ್ತರು ಸುಡುಬಿಸಿಲನ್ನು ಲೆಕ್ಕಿಸದೆ ಮೆರವಣಿಗೆಯುದ್ದಕ್ಕು ಕುಣಿದು ಕುಪ್ಪಳಿಸಿದರು.

ಗೊಂಬೆಕುಣಿತ, ಕೀಲುಕುದುರೆ, ಸೋಮನ ಕುಣಿತ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ನಿಂತ ಜನಸಾಮಾನ್ಯರು ಏಕನಾಥೇಶ್ವರಿ ಅಮ್ಮನ ಮೆರವಣಿಗೆಯನ್ನು ವೀಕ್ಷಿಸಿದರು. ಅಲ್ಲಲ್ಲಿ ಜನ ಮೊಬೈಲ್‌ನಲ್ಲಿ ಏಕನಾಥೇಶ್ವರಿಯನ್ನು ಸೆರೆಹಿಡಿದುಕೊಳ್ಳುತ್ತಿದ್ದರು. ಕೆಲವು ಕಡೆ ಭಕ್ತರಿಗೆ ನೀರು ಹಾಗೂ ಪಾನಕಗಳನ್ನು ವಿತರಿಸಲಾಯಿತು.

ನಗರಸಭೆ ಮಾಜಿ ಉಪಾಧ್ಯಕ್ಷ ರಾಮಜ್ಜ, ಮಾಜಿ ಸದಸ್ಯ ಗಾಡಿ ಮಂಜುನಾಥ್, ಮಾಜಿ ನಾಮ ನಿರ್ದೇಶನ ಸದಸ್ಯ ಓಂಕಾರ್ ಸೇರಿದಂತೆ ಇನ್ನು ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.