ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ಜೂನ್‌ 8ರಿಂದ 20ರ ವರೆಗೆ ನಡೆಸಲಾಗುತ್ತದೆ. ಪರೀಕ್ಷಾ ಶುಲ್ಕ ಪಾವತಿಗೆ ಮೇ 15 ಕೊನೆಯ ದಿನವಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

ಪೂರಕ ಪರೀಕ್ಷೆ ಶುಲ್ಕ ವಿವರ(ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ) ಒಂದು ವಿಷಯಕ್ಕೆ 140 ರೂ, ಎರಡು ವಿಷಯಕ್ಕೆ 270ರೂ, ಮೂರು ಅಥವಾ ಹೆಚ್ಚಿನ ವಿಷಯಗಳು 400ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಕಡ್ಡಾಯವಾಗಿ ಸಲ್ಲಿಸಬೇಕಾದ ಅಂಕಪಟ್ಟಿ ಶುಲ್ಕ 50ರೂಗಳು ನೀಡಬೇಕು.

ಫಲಿತಾಂಶ ತಿರಸ್ಕರಣಾ ಶುಲ್ಕ: ಪ್ರಥಮ ಬಾರಿಗೆ ಒಂದು ವಿಷಯಕ್ಕೆ 175ರೂ, ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ 350 ರೂ.ಶುಲ್ಕ ನೀಡಬೇಕು. ಉತ್ತರ ಪತ್ರಿಕೆ ಸ್ಕ್ಯಾನಿಂಗ್‌ ಪ್ರತಿ, ಉತ್ತರ ಪತ್ರಿಕೆ ಸ್ಕ್ಯಾನಿಂಗ್‌ ಪ್ರತಿಗಾಗಿ ಅರ್ಜಿ ಸಲ್ಲಿಸಲು ಮೇ 7 ಕೊನೆಯ ದಿನವಾಗಿರುತ್ತದೆ. ಸ್ಕ್ಯಾನಿಂಗ್ ಶುಲ್ಕ 530 ರೂ ನೀಡಬೇಕು.

ಉತ್ತರ ಪತ್ರಿಕೆ ಮರು ಮೌಲ್ಯಮಾಪನ- ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 14, ಮರು ಮೌಲ್ಯಮಾಪನ ಶುಲ್ಕ ಪ್ರತಿ ವಿಷಯಕ್ಕೆ 1670ರೂ ಪಾವತಿಸಬೇಕು. ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಮುಂದಿನ ವ್ಯಾಸಂಗಕ್ಕೆ ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮರು ಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬಾರದು.

ಮರು ಮೌಲ್ಯಮಾಪನದ ಫಲಿತಾಂಶವನ್ನು ಇಲಾಖೆಯ www.pue.kar.nic.in ಅಂತರ್ಜಾಲದಲ್ಲಿ ಆಯಾ ದಿನವೇ ಪ್ರಕಟಿಸಲಾಗುವುದು ಎಂದು ಹೇಳಿದೆ.