ನವದೆಹಲಿ: ಕರ್ನಾಟಕ ಸೇರಿದಂತೆ  ದೇಶದ ವಿವಿಧ ಭಾಗಗಳಲ್ಲಿ ಇದೇ 13ರಿಂದ ಚಂಡಮಾರುತ ಬೀಸಲಿದೆ, ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಇತ್ತೀಚೆಗಷ್ಟೇ ಭಾರಿ ದೂಳು ಬಿರುಗಾಳಿ, ಚಂಡಮಾರುತ ಬೀಸಿ, ಮಳೆ ಸುರುದಿದ್ದನ್ನು ನೆನಪಿಸಿದೆ.

ವಾಯವ್ಯ ಮತ್ತು ಪೂರ್ವ ಭಾರತದಲ್ಲಿ ಸ್ಥಳೀಯವಾಗಿ ಮಾರುತಗಳು ರೂಪುಗೊಳ್ಳುತ್ತಿವೆ. ಅದೇ ಸಂದರ್ಭದಲ್ಲಿ ಮೆಡಿಟರೇನಿಯನ್‌ ಪ್ರದೇಶದಲ್ಲಿಯೂ ಮಾರುತಗಳು ರೂಪುಗೊಳ್ಳುತ್ತಿವೆ. ಈ ಮಾರುತಗಳಲ್ಲಿ ತೇವಾಂಶ ಹೆಚ್ಚು. ಇದು ಯುರೋಪ್‌ ಖಂಡದಿಂದ ಅರಬ್ಬಿ ಸಮುದ್ರದತ್ತ ಬರುವಾಗ ತೇವಾಂಶ ಇನ್ನಷ್ಟು ಹೆಚ್ಚುತ್ತದೆ. ಇವೆರಡರ ಸಂಯೋಜನೆಯಿಂದಾಗಿ ಅಲ್ಪ ಅವಧಿಯಲ್ಲಿಯೇ ಹಲವು ಚಂಡಮಾರುತಗಳು ಉಂಟಾಗುತ್ತಿವೆ.ಹಿಮಾಲಯದ ಪಶ್ಚಿಮ ಭಾಗಗಳಲ್ಲಿ ಭಾನುವಾರದಿಂದಲೇ ಹೊಸ ಮಾರುತಗಳು ಸೃಷ್ಟಿಯಾಗಲಿವೆ. ದಕ್ಷಿಣದ ರಾಜ್ಯಗಳಲ್ಲಿಯೂ ಕೆಳಮಟ್ಟದಲ್ಲಿ ಸುಂಟರಗಾಳಿ ಬೀಸಲಿದೆ ಎಂಧು ಹವಾಮಾನ ಇಲಾಖೆ ಹೇಳಿದೆ.