ರಾಜ್ಯದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಎಚ್.ಡಿ. ದೇವೇಗೌಡರನ್ನು ಹಾಡಿ ಹೋಗಳಿದ್ದಾರೆ.
ಮೋದಿಯಂತೂ ತುಸು ಹೆಚ್ಚೇ ಅನಿಸುವಷ್ಟೇ ಮಾಜಿ ಪ್ರಧಾನಿ ದೇವೇಗೌಡರನ್ನು ಹಾಡಿ ಹೋಗಳಿ ಅಟ್ಟಕ್ಕೆ ಏರಿಸುವ ಪ್ರಯತ್ನ ನಡೆಸಿದ್ದಾರೆ.
ಗೌಡ್ರು ದೆಹಲಿಗೆ ಬಂದ್ರೆ ನಾನೇ ಹೋಗಿ ಅವರ ಕಾರು ಬಾಗಿಲು ತೆರೆದು ಸ್ವಾಗತಿಸುತ್ತೇನೆ, ಹೊರಡುವಾಗಲೂ ಕಾರಿನವರೆಗೆ ಹೋಗಿ ಹತ್ತಿಸಿ ಕಳುಹಿಸುತ್ತೇನೆ ಎಂದು ಹೇಳುವ ಮೂಲಕ ಜೆಡಿಎಸ್‌ನತ್ತ ಸಾಫ್ಟ್ ಕಾರ್‍ನರ್ ಆಗಿದ್ದಾರೆ.
ಎಲ್ಲಿಯೂ ತನ್ನ ಭಾಷಣದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಲೇ ಇಲ್ಲ. ಈ ಮೂಲಕ ಸಿಎಂ ಸಿದ್ದರಾಮಯ್ಯ ಆರೋಪವಾದ ಜೆಡಿಎಸ್-ಬಿಜೆಪಿ ದೋಸ್ತಿ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಪುಷ್ಟಿ ನೀಡಿದ್ದಾರೆ.
ಅತ್ತ ಹಾಸನದಲ್ಲಿ ಅಮಿತ್ ಷಾ ಕೂಡ ದೇವೇಗೌಡ್ರು ಕುರಿತು ನನಗೆ ಬಹಳ ಗೌರವ. ಆದರೆ, ಅವರಿಗೆ ಕಾಂಗ್ರೆಸ್ ಸೋಲಿಸುವ ಶಕ್ತಿ ಇಲ್ಲ ಎಂದು ಹೇಳಿದ್ದು, ನಮಗೆ ಅವರ ಸಹಕಾರ ಬೇಕಿಲ್ಲ. ನಾವೇ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯ ಇಬ್ಬರು ನಾಯಕರು ಭವಿಷ್ಯದಲ್ಲಿ ಅತಂತ್ರ ವಿಧಾನಸಭೆ ಎದುರಾದರೆ ದೇವೇಗೌಡರ ಸಹಕಾರ ಪಡೆಯಲು ಈಗಲೇ ಮುನ್ನುಡಿಯನ್ನು ತಮ್ಮ ನಡೆ ಮೂಲಕ ಸಂದೇಶ ನೀಡಿದ್ದಾರೆ.