ಬೆಂಗಳೂರು : ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ದಾಖಲೆ ಇಲ್ಲದೆ 50 ಸಾವಿರ ರೂ. ಕ್ಕಿಂತ ಹೆಚ್ಚು ನಗದು ಮತ್ತು 10 ಸಾವಿರ ರೂ. ಮೀರಿದ ಗೃಹೋಪಯೋಗಿ ವಸ್ತುಗಳನ್ನು ಸಾಗಣೆ ಮಾಡುವಂತಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಎಚ್ಚರಿಸಿದ್ದಾರೆ.

ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ತಡೆಯಲು ನಾಕಾ, ಫ್ಲೈಯಿಂಗ್ ಸ್ಕ್ವಾಡ್, ಸ್ಪಾಟಿಕ್ ಸರ್ವಿಯಲೆನ್ಸ್ ತಂಡಗಳನ್ನು ಸ್ಥಾಪಿಸಲಾಗಿದೆ. ತಪಾಸಣೆ ವೇಳೆ ದಾಖಲೆ ಹಾಜರುಪಡಿಸದಿದ್ದರೆ ಆಯೋಗ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ದೊಡ್ಡ ಮೊತ್ತದ ಬ್ಯಾಂಕ್ ವಹಿವಾಡಿನ ಮೇಲೂ ಕಣ್ಗಾವಲು ಇಡಲಾಗುತ್ತದೆ. 1 ಲಕ್ಷ ಮೀರಿದ ಹಣ ಒಂದೇ ದಿನ ಯಾರದಾದ್ದರೂ ಖಾತೆಯಿಂದ ಠೇವಣಿಯಾದರೆ ಜಿಲ್ಲಾಧಿಕಾರಿಗಳು ಪರಿಶೀಲಿಸುತ್ತಾರೆ. 10 ಲಕ್ಷ ರೂ. ಮೀರಿಹ ಹಣ ಠೇವಣಿಯಾದಾಗ ಐಟಿ ವಿಚಾರಣೆ ಎದುರಿಸಬೇಕಾಗುತ್ತದೆ. ಡಿಜಿಟಲ್ ಹಣ ವರ್ಗಾವಣೆ ಬಗ್ಗೆಯೂ ಆಯೋಗ ನಿಗಾ ವಹಿಸುತ್ತದೆ ಎಂದರು.

ಸಾರ್ವಜನಿಕ ಕಾರ್ಯಕ್ರಮದ ನೆಪದಲ್ಲಿ ರಾಜಕೀಯ ವ್ಯಕ್ತಿಗಳು ನಗದು, ಉಡುಗೊರೆ, ಮದ್ಯ, ಊಟದ ವ್ಯವಸ್ಥೆ ಸೇರಿದಂತೆ ಮತದಾರರನ್ನು ಓಲೈಸಲು ಯಾವುದೇ ರೀತಿಯ ಆಮಿಷ ಒಡ್ಡಿದರೆ ಆಯೋಗ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದೂ ಅವರು ಎಚ್ಚರಿಕೆ ನೀಡಿದರು.