ಬೆಂಗಳೂರು: ದೇವನಹಳ್ಳಿಯ ರಾಣಿ ಸರ್ಕಲ್ ಸಮೀಪದ ಚೆಕ್‍ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಖಾಸಗಿ ಬಸ್‍ನಲ್ಲಿ ಸಾಗಿಸುತ್ತಿದ್ದ 42 ಲಕ್ಷ ರೂ.ಗಳನ್ನು ಚುನಾವಣಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಬ್ಯಾಗ್‍ನಲ್ಲಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ದೇವನಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೈದರಾಬಾದ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‍ನ್ನು ಚುನಾವಣೆಗಾಗಿ ದೇವನಹಳ್ಳಿಯ ರಾಣಿ ಸರ್ಕಲ್ ಬಳಿ ನಿರ್ಮಿಸಿರುವ ಚೆಕ್‍ ಪೋಸ್ಟ್ ನಲ್ಲಿ ಅಧಿಕಾರಿಗಳು ತಪಾಸಣೆ ಮಾಡಿದಾಗ ಈ ಹಣ ದೊರೆತಿದೆ ಎಂದು  ತಿಳಿದು ಬಂದಿದ್ದು, ಈ ಚೆಕ್‍ ಪೋಸ್ಟ್ ನಲ್ಲಿ ಇದುವರೆಗೆ ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.