ಚಿತ್ರದುರ್ಗ:  ಕರ್ನಾಟಕ ರಾಜ್ಯ ಮಹಿಳಾ  ಅಭಿವೃದ್ಧಿ ನಿಗಮ ವತಿಯಿಂದ ಚೇತನಾ ಯೋಜನೆಯಡಿ ಪ.ಜಾತಿ ಮತ್ತು ಪ.ಪಂಗಡದ ದಮನಿತ ಮಹಿಳೆಯರಿಗೆ ಸಾಲ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಜೂ 30 ಕೊನೆ ದಿನವಾಗಿದೆ.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಅನುಷ್ಠಾಗೊಳ್ಳಿಸುತ್ತಿರುವ ಚೇತನಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಪ.ಜಾತಿ ಮತ್ತು ಪ.ಪಂಗಡದ ದಮನಿತ ಮಹಿಳೆಯರು ತಮ್ಮ ವೃತ್ತಿ ಜೀವನದಿಂದ ಹೊರಬಂದು ಸ್ವಾವಲಂಬಿಗಳಾಗಿ ಜೀವನ ನಡೆಸಲು ಮತ್ತು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ  ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಅನುಕೂಲವಾಗುವಂತೆ 50 ಸಾವಿರ ರೂ. ಸಾಲ ಮತ್ತು 50 ಸಾವಿರ ರೂ.ಗಳ ಪ್ರೋತ್ಸಾಹಧನ ಸೇರಿ ಒಟ್ಟು 1 ಲಕ್ಷ ರೂ. ಗಳವರೆಗೆ ಆರ್ಥಿಕ ಸೌಲಭ್ಯವನ್ನು ಪಡೆಯಬಹುದಾಗಿದೆ. ಜಿಲ್ಲೆಗೆ ಪ.ಜಾತಿ-24 ಮತ್ತು ಪ.ಪಂಗಡ-09 ಸೇರಿದಂತೆ ಒಟ್ಟು-33 ಜನರಿಗೆ ಸೌಲಭ್ಯ ಕಲ್ಪಿಸಲು  ಗುರಿ ನಿಗದಿಪಡಿಸಿದ್ದು, ಜಿಲ್ಲೆಯಲ್ಲಿರುವ ಸಮುದಾಯ ಆಧಾರಿತ ಸಂಸ್ಥೆಯಿಂದ ನೊಂದಾಯಿಸಲ್ಪಟ್ಟ ಪ.ಜಾತಿ ಮತ್ತು ಪ.ಪಂಗಡದ ದಮನಿತ  ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಮಹಿಳೆಗೆ 18 ವರ್ಷ ಮೇಲ್ಪಟ್ಟು ವಯೋಮಿತಿ ಇರಬೇಕು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು, ಜಿಲ್ಲೆಯಲ್ಲಿರುವ ಸಮುದಾಯ ಆಧಾರಿತ ಸಂಸ್ಥೆಯಿಂದ ಅಧೀಕೃತ ದೃಡೀಕರಣ ಪತ್ರ ಹೊಂದಿರಬೇಕು, ಅರ್ಜಿದಾರರು ಆಯ್ಕೆ ಮಾಡಿಕೊಂಡ ಆದಾಯೋತ್ಪನ್ನ ಚಟುವಟಿಕೆಯ ಯೋಜನಾವರದಿ ಸಲ್ಲಿಸಬೇಕು, ರಾಷ್ಟ್ರೀಕೃತ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು ಹಾಗೂ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಜೋಡಣೆಯಾಗಿರಬೇಕು, ಯಾವುದೇ ಆರ್ಥಿಕ ಸಂಸ್ಥೆ ಬ್ಯಾಂಕ್ ಗಳಲ್ಲಿ ಸುಸ್ಥಿದಾರರಾಗಿಬಾರದು, ಅರ್ಜಿದಾರರು ಖಾತೆ ಹೊಂದಿರುವ ಬ್ಯಾಂಕಿನಲ್ಲಿ ಸಾಲ ಪಡೆದಿಲ್ಲ ಎಂಬ ದೃಡೀಕರಣ ಪತ್ರ ಸಲ್ಲಿಸಬೇಕು, ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರಬೇಕು ಹಾಗೂ 20 ರೂ ಕರಾರು ಒಪ್ಪಂದ ಪತ್ರವನ್ನು ಸಲ್ಲಿಸಬೇಕು.

ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆ ಲಭ್ಯವಿದೆ. ಅರ್ಜಿ ಭರ್ತಿ ಮಾಡಿ ಅರ್ಹ ದಾಖಲೆಗಳೊಂದಿಗೆ ಜೂ. 30 ರಂದು ಸಂಜೆ 5.30 ರೊಳಗೆ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಶಿಶು ಅಭಿವೃದ್ಧಿ  ಯೋಜನಾಧಿಕಾರಿಗಳ ಕಚೇರಿ 08194 235958, ಚಳ್ಳಕೆರೆ-08195 250291, ಹೊಳಲ್ಕೆರೆ-08191 275250, ಹೊಸದುರ್ಗ-08199 230212, ಹಿರಿಯೂರು-08193 263512, ಮೊಳಕಾಲ್ಮೂರು-08198 229565 ಕ್ಕೆ ಸಂಪರ್ಕಿಸಬಹುದು ಎಂದು ಮಹಿಳಾ ಮಕ್ಕಳ ಅಭಿವೃದ್ಧಿ  ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.