ಪಾಟ್ನಾ: ಬಿಹಾರದಲ್ಲಿ ಮಹಾಘಟಬಂಧನ್‌ನ ದುರ್ಬಲ ಪಕ್ಷವಾಗ ಕಾಂಗ್ರೆಸ್ ಹೊರಹೊಮ್ಮಿರುವುದು ತೇಜಸ್ವಿ ಯಾದವ್‌ ಮುಖ್ಯಮಂತ್ರಿ ಕನಸಿಗೆ ಮುಳುವಾಗಿ ಪರಿಣಮಿಸಿದೆ. ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ಮಹಾಮೈತ್ರಿಗೆ ಗೆಲುವಿನ ಪೇಟ ತೋಡಿಸಿದ್ದರೂ ಕಾಂಗ್ರೆಸ್‌ನ ನಿರಾಶದಾಯಕ ಪ್ರದರ್ಶನದಿಂದ ತೇಜಸ್ವಿ ಯಾದವ್‌ ಅವರಿಗೆ ಸಿಎಂ ಸ್ಥಾನ ಕೈ ತಪ್ಪುತ್ತಿದೆ.

ಇದರಿಂದ ತೇಜಸ್ವಿ ಯಾದವ್‌ ಸೀಟು ಹಂಚಿಕೆಯಲ್ಲಿ ತಪ್ಪು ಮಾಡಿದರಾ ಎಂಬ ಮಾತುಗಳು ಕೇಳಿಬರುತ್ತಿದ್ದು, ಕಾಂಗ್ರೆಸ್‌ಗೆ ಅರ್ಹತೆಗಿಂತಲೂ ಹೆಚ್ಚು ಕ್ಷೇತ್ರ ಬಿಟ್ಟುಕೊಟ್ಟಿದ್ದೆ ಈ ಸೋಲಿಗೆ ಕಾರಣವಾಯಿತು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ. ಕಾಂಗ್ರೆಸ್‌ ಒಟ್ಟು 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆರ್‌ಜೆಡಿ (144) ನಂತರ ಮಹಾಮೈತ್ರಿಯಲ್ಲಿ ಹೆಚ್ಚು ಕ್ಷೇತ್ರಗಳು ‘ಕೈ’ ಪಾಲಾಗಿದ್ದವು. ಉಳಿದ ಕ್ಷೇತ್ರಗಳು ಎಡಪಕ್ಷಗಳಿಗೆ ಮೀಸಲಿಡಲಾಗಿತ್ತು.

ಆದರೆ, 70 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಕೇವಲ 18ರಲ್ಲಿ ಮಾತ್ರ ಮುನ್ನಡೆಯಲ್ಲಿದೆ. ಇದು ತೇಜಸ್ವಿ ಯಾದವ್‌ ನೇತೃತ್ವದ ಮಹಾಘಟಬಂಧನ್‌ಗೆ ದೊಡ್ಡ ಹೊಡೆತ ನೀಡಿದಂತಾಗಿದೆ. ಕಾಂಗ್ರೆಸ್‌ಗಿಂತ ಆರ್‌ಜೆಡಿಯೇ ಮುನ್ನಡೆಯಲ್ಲಿ ಹೆಚ್ಚಿನ ಸರಾಸರಿ ಹೊಂದಿದ್ದು, ಬಿಜೆಪಿ, ಜೆಡಿಯು, ಆರ್‌ಜೆಡಿ ನಂತರ ನಾಲ್ಕನೇ ಸ್ಥಾನಕ್ಕೆ ಭಾರತದ ಅತಿ ಹಳೇಯ ಪಕ್ಷ ತಳ್ಳಲ್ಪಟ್ಟಿದೆ.