ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಎಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ರಾಜ್ಯದ 38 ಜಿಲ್ಲೆಗಳ 55 ಎಣಿಕೆ ಕೇಂದ್ರಗಳಲ್ಲಿ ಪ್ರಾರಂಭವಾಗುತ್ತಿದ್ದಂತೆ, ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಕಿರಿಯ ಸಹೋದರ ತೇಜಸ್ವಿ ಯಾದವ್ ವಿಜಯಶಾಲಿಯಾಗಿ ಹೊರಹೊಮ್ಮುವಂತೆ ಆಶೀರ್ವದಿಸಿದರು.

ತೇಜ್ ಪ್ರತಾಪ್ ಯಾದವ್ ಅವರು ತಮ್ಮ ಸಹೋದರ ಮತ್ತು ಪಕ್ಷದ ಕಾರ್ಯಕ್ಷಮತೆಯ ಮೇಲಿನ ವಿಶ್ವಾಸವನ್ನು ಸೂಚಿಸಿ, “ತೇಜಶ್ವಿ ಭವಃ ಬಿಹಾರ’ ಎಂದು ಟ್ವೀಟ್ ಮಾಡಿದ್ದಾರೆ.

ಬಿಹಾರದಲ್ಲಿ ಆರಂಭಿಕ ಟ್ರೆಂಡ್ ನಂತೆ ತೇಜಸ್ವಿ ಮುಂದೆ, ನಿತೀಶ್ ಹಿಂದೆ

ಒಟ್ಟು 3,755 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಬಿಹಾರದ 243-ವಿಧಾನಸಭಾ ಕ್ಷೇತ್ರಗಳ ಮತದಾನವನ್ನು ಅಕ್ಟೋಬರ್ 28, ನವೆಂಬರ್ 3 ಮತ್ತು ನವೆಂಬರ್ 7 ರಂದು ಮೂರು ಹಂತಗಳಲ್ಲಿ ನಡೆಸಲಾಗಿತ್ತು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 7,29,27,396 ಕ್ಕೂ ಹೆಚ್ಚು ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು. ಈ ಬಾರಿ ಶೇ.57.05 ರಷ್ಟು ಮತದಾನವಾಗಿದ್ದು, ಇದು 2015 ರ ಚುನಾವಣೆಯಲ್ಲಿ ಶೇ.56.66 ಕ್ಕೆ ಹೋಲಿಸಿದರೆ 0.39 ರಷ್ಟು ಹೆಚ್ಚಾಗಿದೆ.

ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ಮಾರ್ಗಸೂಚಿಗಳನ್ನು ಅನುಸರಿಸುವ ಸಲುವಾಗಿ ಬಿಹಾರದಾದ್ಯಂತ 38 ಜಿಲ್ಲೆಗಳ ಎಣಿಕೆ ಕೇಂದ್ರಗಳ ಸಂಖ್ಯೆಯನ್ನು 55ಕ್ಕೆ ಹೆಚ್ಚಿಸಿದೆ. 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಎಣಿಕೆ ಕೇಂದ್ರಗಳ ಸಂಖ್ಯೆ 38 ಆಗಿತ್ತು.