ಚಿತ್ರದುರ್ಗ : ತುಮಕೂರು-ಚಿತ್ರದುರ್ಗ-ದಾವಣಗೆರೆ ನಗರಗಳಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ನೂತನ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ತಾಲ್ಲೂಕಿನಲ್ಲಿ ಬರುವ 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣ ಸಲುವಾಗಿ 25 ಗ್ರಾಮಗಳ 444.12 ಎಕರೆ ಭೂ-ಸ್ವಾಧೀನಕ್ಕಾಗಿ ಕ್ರಮ ಕೈಗೊಳ್ಳಲಾಗಿದ್ದು, ಭೂ-ಸ್ವಾಧೀನ ಕಾಯ್ದೆ 2013 ರನ್ವಯ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಹೇಳಿದರು.

ಚಿತ್ರದುರ್ಗ ತಾಲ್ಲೂಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾದ ಜಿಲ್ಲಾ ಮಟ್ಟದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ನೂತನ ರೈಲ್ವೆ ಮಾರ್ಗವು 201.47 ಕಿ.ಮೀ ಇರಲಿದ್ದು, ಈ ನೇರ ಮಾರ್ಗದಿಂದ ತುಮಕೂರು-ದಾವಣಗೆರೆ ನಡುವಿನ ದೂರವನ್ನು 53.71 ಕಿ.ಮೀ. ಕಡಿಮೆಗೊಳಿಸಲಿದೆ.  ನೂತನ ರೈಲ್ವೆ ಮಾರ್ಗದಡಿ ಚಿತ್ರದುರ್ಗ ತಾಲ್ಲೂಕಿನಲ್ಲಿ 25 ಗ್ರಾಮಗಳ ಡಿ.ಎಸ್.ಹಳ್ಳಿ ಗ್ರಾಮದಿಂದ ಹಂಪನೂರು ಗ್ರಾಮದವರೆಗೆ ಒಟ್ಟು 46.58 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣವಾಗಬೇಕಿದೆ.  ಇದಕ್ಕಾಗಿ ಒಟ್ಟು 444.12 ಎಕರೆ ಭೂಮಿಯ ಅಗತ್ಯತೆ ಇದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕಳೆದ ಜೂ. 11 ರಂದು ಎಲ್ಲ ಗ್ರಾಮಗಳಲ್ಲಿ ಪುನರ್ ವ್ಯವಸ್ಥೆ ಮತ್ತು ಪುನರ್ ನಿರ್ಮಾಣ ಗ್ರಾಮಸಭೆಗಳನ್ನು ನಡೆಸಿ, ಬಾಧಿತರಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ. ಯೋಜನಾ ವೆಚ್ಚ 286.57 ಕೋಟಿ ರೂ. ಗಳಾಗಿದ್ದು ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ, ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು.  ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆಯನ್ನು ಈ ವರ್ಷಾಂತ್ಯದೊಳಗೆ ಹೊರಡಿಸಿ, ರೈಲ್ವೆ ಇಲಾಖೆ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಅನುವು ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಉದ್ದೇಶಿತ ನೂತನ ರೈಲ್ವೆ ಮಾರ್ಗದಲ್ಲಿ ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು, ಕಸಬಾ ಮತ್ತು ಭರಮಸಾಗರ ಹೋಬಳಿ ವ್ಯಾಪ್ತಿಯಲ್ಲಿನ 25 ಗ್ರಾಮಗಳ ವ್ಯಾಪ್ತಿಯ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕಿದೆ. ಇದರಿಂದ ಬಾಧಿತರಾಗುವ ಸಂತ್ರಸ್ಥರಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಸೌಲಭ್ಯ ಕಲ್ಪಿಸಲು ಹಾಗೂ ಪರಾಮರ್ಶಿಸಲು ಹೊಸ ಭೂಸ್ವಾಧೀನ ಕಾಯ್ದೆ 2013 ರಂತೆ ಜಿಲ್ಲಾ ಮಟ್ಟದಲ್ಲಿ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಯೋಜನಾ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.  ಉದ್ದೇಶಿತ ನೂತನ ರೈಲ್ವೆ ಮಾರ್ಗದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ದೊಡ್ಡಸಿದ್ದವ್ವನಹಳ್ಳಿ, ಸಿರಿಗೆರೆ, ಭರಮಸಾಗರ, ಚಿತ್ರದುರ್ಗ ಸೇರಿದಂತೆ 04 ನಿಲ್ದಾಣಗಳನ್ನು ಪ್ರಸ್ತಾಪಿಸಲಾಗಿದೆ.  ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ ಭೂಮಿಗೆ ಪರಿಹಾರ ಪಾವತಿ ಮಾಡಿ ರೈಲ್ವೆ ಇಲಾಖೆಗೆ ಹಸ್ತಾಂತರ ಮಾಡಬೇಕಿದ್ದು, ನಿರ್ಮಾಣ ವೆಚ್ಚದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಲಾ ಅರ್ಧ ವೆಚ್ಚ ಭರಿಸಲಿವೆ. ಯೋಜನೆಯಡಿ ತಾಲ್ಲೂಕಿನಲ್ಲಿ ಶೇ. 50 ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ 09 ಕುಟುಂಬಗಳನ್ನು ಈಗಾಗಲೆ ಗುರುತಿಸಿದ್ದು, ಇವರಿಗೆ ನಿಯಮಾನುಸಾರ ಹೆಚ್ಚುವರಿ 05 ಲಕ್ಷ ರೂ. ಪರಿಹಾರ ದೊರೆಯಲಿದೆ. ಅಲ್ಲದೆ ಮನೆ, ತೋಟ ಮತ್ತಿತರ ಆಸ್ತಿ-ಪಾಸ್ತಿ ಕಳೆದುಕೊಳ್ಳುವವರಿಗೂ ಪರಿಹಾರ ದೊರೆಯಲಿದೆ ಎಂದರು.

ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ,ಸಂಸದ ಎ. ನಾರಾಯಣಸ್ವಾಮಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ಪ್ರಸನ್ನ ಅವರು ಮಾತನಾಡಿದರು.

ಚಿತ್ರದುರ್ಗ ತಾಲ್ಲೂಕಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಯಿಂದ ಡಿ.ಎಸ್.ಹಳ್ಳಿ ಗ್ರಾಮದಲ್ಲಿ 65 ಕುಟುಂಬಗಳು ಬಾಧಿತವಾಗಲಿವೆ.  ಅದೇ ರೀತಿ ಹಂಪನೂರು-31, ಚೀಳಂಗಿ-10, ಜಟ್ಲಹಳ್ಳಿ-11, ಕೊಳಹಾಳ್-12, ಸಾದರಹಳ್ಳಿ-11, ಮಾರಗಟ್ಟ-25, ಚಿಕ್ಕಪುರ-12, ಈಚಲನಾಗೇನಹಳ್ಳಿ-20, ಕೆಳಗೋಟೆ-14, ಸಿದ್ದಾಪುರ-30, ಬಳ್ಳೆಕಟ್ಟೆ-21, ವಿಜಾಪುರ-24, ಲಕ್ಷ್ಮೀಸಾಗರ-28, ಹಿರೇಬೆನ್ನೂರು-10, ಚಿಕ್ಕಬೆನ್ನೂರು-12 ಸೇರಿದಂತೆ ಒಟ್ಟಾರೆ 25 ಗ್ರಾಮಗಳ 389 ಕುಟುಂಬಗಳು ಬಾಧಿತವಾಗಲಿವೆ.  ಈಗಾಗಲೆ ಗ್ರಾಮ ಸಭೆಗಳನ್ನು ನಡೆಸಿ, ಬಾಧಿತ ಕುಟುಂಬಗಳಿಂದ ಅಹವಾಲು, ಆಕ್ಷೇಪಣೆಗಳನ್ನು ಸ್ವೀಕರಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ನೈರುತ್ಯ ರೈಲ್ವೆ ಇಲಾಖೆಯ ಭೂಕೋರಿಕೆ ವಿಭಾಗದ ಸೀನಿಯರ್ ಸೆಕ್ಷನ್ ಇಂಜಿನಿಯರ್ ಶಶಿಧರ್, ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ್, ಚಿತ್ರದುರ್ಗ ತಾಲ್ಲೂಕಿನ ಸಂಬಂಧಪಟ್ಟ ಗ್ರಾಮ ಪಂಚಾಯತ್ ಗಳ ಅಧ್ಯಕ್ಷರು, ಕಂದಾಯ ಹಾಗೂ ಗ್ರಾ.ಪಂ. ಗಳ ಅಧಿಕಾರಿಗಳು ಭಾಗವಹಿಸಿದ್ದರು.