ಚಳ್ಳಕೆರೆ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ದೋಸ್ತಿ ಆಗಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ಜೆಡಿಎಸ್‌ನ ಕವಿತಾರಾಮಣ್ಣ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪಕ್ಷದ ಗೆಲುವಿಗೆ ಪಕ್ಷವನ್ನು ತೆಗೆದುಕೊಂಡು ಹೋಗುವಲ್ಲಿ ಉತ್ತಮ ಹೆಜ್ಜೆ ಇಟ್ಟಿದ್ದಾರೆ.
ತಾಲ್ಲೂಕು ಪಂಚಾಯಿತಿ ಆಡಳಿಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಡಂಬಡಿಕೆ ಇದ್ದು, ಮೊದಲ ಅವದಿಯಲ್ಲಿ ಕಾಂಗ್ರೆಸ್ ಪಕ್ಷದವರು ಅಧ್ಯಕ್ಷರಾಗಿದ್ದು, ಜೆಡಿಎಸ್‌ನವರು ಉಪಾಧ್ಯಕ್ಷರಾಗಿದ್ದು, ಬುಧವಾರ ಅಧ್ಯಕ್ಷಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಬೆಂಬಲ ನೀಡಿದ್ದು, ಪರಶುರಾಮಪುರ ಹೋಬಳಿ ಪಿ.ಮಹದೇವಪುರ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದ ಕವಿತಾರಾಮಣ್ಣ ಅಧ್ಯಕ್ಷರಾಗುವ ಮೂಲಕ ಜೆಡಿಎಸ್ ಪಕ್ಷ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಲು ಕಾರಣರಾಗಿದ್ಧಾರೆ.
ಉಪಾಧ್ಯಕ್ಷೆ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದ್ದು, ದೇವರೆಡ್ಡಿಹಳ್ಳಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಿಂದ ತಿಪ್ಪಮ್ಮ ಎಂಬುವವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆ, ಚುನಾವಣಾಧಿಕಾರಿಯಾಗಿದ್ದ ಉಪ ನೊಂದಾಣಾಧಿಕಾರಿ ವಿಜಯಕುಮಾರ್ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ಸಹಾಯಕ ಚುನಾವಣಾಧಿಕಾರಿಯಾಗಿ ಇಒ ಈಶ್ವರಪ್ರಸಾದ್ ಕಾರ್ಯನಿರ್ವಹಿಸಿದರು.
ನೂತನ ಆಯ್ಕೆ ನಂತರ ಸಂತಸಗೊಂಡ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ತಮ್ಮ ಸಂತಸ ವ್ಯಕ್ತ ಪಡಿಸಿದರಲ್ಲದೆ, ನಗರ ಪ್ರಮುಖ ಬೀದಿಗಳಲ್ಲಿ ಅಧ್ಯಕ್ಷೆ-ಉಪಾಧ್ಯಕ್ಷೆಯನ್ನು ಮೆರವಣಿಗೆಯನ್ನು ಸಹ ನಡೆಸಿದರು.