ಬಾಗಲಕೋಟೆ: ರಾಮಕೃಷ್ಣ ಹೆಗಡೆ ಅವರ ದೂರದೃಷ್ಠಿಯ ಫಲವಾಗಿ ಇಡೀ ದೇಶಕ್ಕೆ ಮಾದರಿಯಾದ ಪಂಚಾಯತ್ ರಾಜ್ ವ್ಯವಸ್ಥೆ ನಮ್ಮ ರಾಜ್ಯದಲ್ಲಿತ್ತು. ಆದರೆ ವೀರಪ್ಪ ಮೋಯ್ಲಿ ಅವರು ಮುಖ್ಯಮಂತ್ರಿಯಾದ ಬಳಿಕ ಪಂಚಾಯತ್ ವ್ಯವಸ್ಥೆಯ ಅರಿವಿಲ್ಲದೆ ಅವಿವೇಕಿತನದ ನಿರ್ಧಾರದಿಂದ ಈ ವ್ಯವಸ್ಥೆಯೇ ಕುಲಗೆಟ್ಟಿತು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಎರಡು ಹಂತದ ವ್ಯವಸ್ಥೆಗೊಳಿಸಲು ಚರ್ಚೆ ನಡೆಸುತ್ತಿದ್ದು, ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದುಗೊಳಿಸುವ ಚಿಂತನೆ ನಡೆದಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಪಂಚಾಯತ್ ರಾಜ್ ನಲ್ಲಿ ಮೊದಲು ಎರಡು ಹಂತದ ವ್ಯವಸ್ಥೆಯಿತ್ತು. ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ವ್ಯವಸ್ಥೆ ಇದ್ದಾಗ ಗ್ರಾಮೀಣ ಅಭಿವೃದ್ದಿಗೆ ಬಹಳಷ್ಟು ಅನುದಾನ, ಶಿಸ್ತುಬದ್ಧ ವ್ಯವಸ್ಥೆಯಿತ್ತು. ರಾಮಕೃಷ್ಣ ಹೆಗಡೆ ಅವರು ಈ ವ್ಯವಸ್ಥೆಯನ್ನು ಇಡೀ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೊಳಿಸಿದಾಗ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೇಂದ್ರದ ತಂಡ ಕಳುಹಿಸಿ ಅಧ್ಯಯನ ಮಾಡಿಸಿದ್ದರು. ಇಂತಹ ವ್ಯವಸ್ಥೆಯನ್ನು ವೀರಪ್ಪ ಮೋಯ್ಲಿ ಕುಲಗೆಡೆಸಿದರು ಎಂದು ಆರೋಪಿಸಿದ್ದಾರೆ.