ಮಡಿಕೇರಿ : ತಲಕಾವೇರಿ ತುಲಾ ಸಂಕ್ರಮಣ ಜಾತ್ರೆಯನ್ನು ಸಂಪ್ರದಾಯದಂತೆ ಆಚರಿಸಬೇಕು. ಪೂಜಾ ವಿಧಿ ವಿಧಾನಗಳಲ್ಲಿ ಯಾವುದೇ ಲೋಪ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಕೋವಿಡ್-19 ಸಂಬಂಧ ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಸಲಹೆ ಮಾಡಿದ್ದಾರೆ.

ನಗರದ ಜಿ.ಪಂ.ಸಭಾಂಗಣದಲ್ಲಿ ತಲಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಂಬಂಧ ಮಾಹಿತಿ ಪಡೆದು ಅವರು ಮಾತನಾಡಿದರು.
ಪೂಜಾ ಕೈಂಕರ್ಯದಲ್ಲಿ ಯಾವುದೇ ರೀತಿಯ ಸಣ್ಣ ಲೋಪ ಉಂಟಾಗದಂತೆ ಶ್ರದ್ಧಾ ಭಕ್ತಿಯಿಂದ ನೆರವೇರಿಸಬೇಕು ಎಂದರು.

ಕಳೆದ ಬಾರಿ ತುಲಾಸಂಕ್ರಮಣ ಜಾತ್ರೆಗೆ ಕಂದಾಯ ಸಚಿವರಾದ ಆರ್.ಅಶೋಕ್ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹಾಪೌರರು ಆಗಮಿಸಿದ ಸಂದರ್ಭದಲ್ಲಿ ತಲಕಾವೇರಿ ಅಭಿವೃದ್ಧಿಗೆ ಒಂದು ಕೋಟಿ ರೂ. ನೀಡಲು ಆಶ್ವಾಸನೆ ನೀಡಿದ್ದರು. ಅದರಂತೆ 1 ಕೋಟಿ ರೂ. ಚೆಕ್ ನೀಡಿದ್ದು, ಜಿಲ್ಲಾಧಿಕಾರಿ ಅವರಿಗೆ ಇದೇ ಸಂದರ್ಭದಲ್ಲಿ ಚೆಕ್ ಹಸ್ತಾಂತರಿಸಿದರು.

ಶಾಸಕರು, ಸಂಸದರ ಮಾರ್ಗದರ್ಶನದಂತೆ ತಲಕಾವೇರಿ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಬೇಕು ಎಂದು ವಿ.ಸೋಮಣ್ಣ ಅವರು ಹೇಳಿದರು.  ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಭಾಗಮಂಡಲ ತಲಕಾವೇರಿ ಜಾತ್ರೆಯನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಹೇಗೆ ನಿಭಾಯಿಸಬೇಕಿದೆ ಎಂದು ಯೋಚಿಸಬೇಕಿದೆ. ಕಳೆದ ಬಾರಿ ತೀರ್ಥೋದ್ಭವ ಸಂದರ್ಭದಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್ ಹಾಗೂ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಪೌರರರು ತಲಕಾವೇರಿಯಲ್ಲಿ ತಕ್ಕ ಮುಖ್ಯಸ್ಥರು ಉಳಿದುಕೊಳ್ಳಲು ಪುನರ್ ನಿರ್ಮಾಣಕ್ಕೆ ಹಣ ನೀಡಿದ್ದು, ಅದರಂತೆ ಅಂದಾಜು ಪಟ್ಟಿ ಸಿದ್ಧವಾಗಿದ್ದು, ಇದಕ್ಕೆ ಸಹಕರಿಸಬೇಕಿದೆ ಎಂದು ಅವರು ತಿಳಿಸಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಅವರಿಗೆ ಅಭಿನಂದನಾ ಪತ್ರ ಕಳುಹಿಸಿಕೊಡಬೇಕು ಎಂದು ಅವರು ಸಲಹೆ ಮಾಡಿದರು.  ತಲಕಾವೇರಿ ಜಾತ್ರೆಗೆ ತೆರಳುವವರು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ಹೋಗಬೇಕು ಎಂದು ಅಪ್ಪಚ್ಚು ರಂಜನ್ ಅವರು ಸಲಹೆ ಮಾಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರು ಪಿಂಡ ಪ್ರಧಾನ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಲಾಗುವುದು. ಕೊಳದಲ್ಲಿ ತೀರ್ಥ ಸ್ನಾನ ಬದಲಾಗಿ ತೀರ್ಥ ಪ್ರೋಕ್ಷಣೆ ಮಾಡಲಾಗುವುದು. ಈ ಬಾರಿ ಅನ್ನದಾನಕ್ಕೆ ಅವಕಾಶವಿಲ್ಲ. ತೀರ್ಥವನ್ನು ಟ್ರಾಕ್ಟರ್‍ನಲ್ಲಿ ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆ ಅವರು ಅಗತ್ಯ ಬ್ಯಾರಿಕೇಡ್ ನಿರ್ಮಾಣ ಹಾಗೂ ಬಂದೋಬಸ್ತ್ ಮಾಡಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಕೋವಿಡ್ ಸಂಬಂಧಿಸಿದಂತೆ ಜಾಗೃತಿ ಮೂಡಿಸಬೇಕು. ಈ ಬಾರಿ ಯಾವುದೇ ರೀತಿಯ ವಾಹನಗಳಿಗೆ ಪಾಸ್ ಇರುವುದಿಲ್ಲ ಎಂದು ಬಿ.ಎಸ್.ತಮ್ಮಯ್ಯ ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಇತರರು ಇದ್ದರು.
ಮತ್ತಷ್ಟು ಮಾಹಿತಿ: ಈ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಪೆÇಲೀಸ್ ಇಲಾಖೆ ವತಿಯಿಂದ ಜನರಿಗೆ ತೊಂದರೆಯಾಗದಂತೆ ಸೂಕ್ತ ಬಂದೋಬಸ್ತ್ ಮಾಡಬೇಕು. ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಭಾಗಮಂಡಲ ಗ್ರಾಮ ಪಂಚಾಯತ್ ವತಿಯಿಂದ ಬೀದಿ ದೀಪಗಳ ವ್ಯವಸ್ಥೆ, ಭಾಗಮಂಡಲ-ತಲಕಾವೇರಿ ಕಾಲುದಾರಿ ದುರಸ್ತಿ ಬಸ್ ಶೆಲ್ಟರ್ ಗಳಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯವನ್ನು ತಾ.ಪಂ, ಜಿ.ಪಂ.ಮತ್ತು ಗ್ರಾ.ಪಂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು.

ಶುಚಿತ್ವದ ಬಗ್ಗೆ ಹೆಚ್ಚಿನ ಗಮನ ಹರಿಸಿ ಪ್ಲಾಸ್ಟಿಕ್ ಬಳಸದಂತೆ ಕ್ರಮ ವಹಿಸಿ. ಮಡಿಕೇರಿ-ಭಾಗಮಂಡಲ ಮದ್ಯೆ ಇರುವ ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ ಗ್ರಾ.ಪಂ ವತಿಯಿಂದ ಸಹಕಾರ ಪಡೆಯಬೇಕು. ಬೀದಿದೀಪ, ಶುಚಿತ್ವ, ಸ್ವಾಗತ ಕೋರುವ ಬ್ಯಾನರ್ ಗಳನ್ನು ಅಳವಡಿಸುವ ಕಾರ್ಯವಾಗಬೇಕು ಎಂದು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಭಾಗಮಂಡಲಕ್ಕೆ ಸೇರುವ ಎಲ್ಲಾ ರಸ್ತೆಗಳ ದುರಸ್ತಿ ಕಾರ್ಯವಾಗಬೇಕು. ಅಗತ್ಯ ಸ್ಥಳಗಳಲ್ಲಿ ನಾಮಫಲಕ ಅಳವಡಿಸಿ. ಸೇತುವೆಗಳಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ಮತ್ತು ಅತೀ ಮುಖ್ಯವಾಗಿ ಸೂಕ್ತ ರೀತಿಯಲ್ಲಿ ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಭಾಗಮಂಡಲ-ತಲಕಾವೇರಿಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯಬೇಕು. ಪ್ರಥಮ ಚಿಕಿತ್ಸೆಗೆ ಬೇಕಾದ ಎಲ್ಲಾ ವ್ಯವಸ್ಥೆ ಆಗಬೇಕು. ಆಂಬುಲೆನ್ಸ್, ನುರಿತ ವೈದ್ಯರು, ಅಗತ್ಯ ಪೂರಕ ಸಿಬ್ಬಂದಿಗಳೊಂದಿಗೆ ಉತ್ತಮ ಔಷಧ ಒದಗಿಸಬೇಕು ಎಂದರು. ಅಲ್ಲದೆ ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಗಳ ವೈದ್ಯರ ಸೇವೆ ಮತ್ತು ಅಗತ್ಯ ಔಷಧ ಸಿದ್ದವಿರಬೇಕು. ಜೊತೆಗೆ ಸ್ಥಳೀಯ ಹೋಟೆಲ್ ಗಳಲ್ಲಿ ಉತ್ತಮ ಗುಣಮಟ್ಟದ ಆಹಾರದ ಪರಿಶೀಲನೆ ಕಾರ್ಯವನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅವರು ಜಾತ್ರಾ ದಿನಗಳಂದು ಸಮರ್ಪಕ ವಿದ್ಯುತ್ ಪೂರೈಸುವುದು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ವಿದ್ಯುತ್ ಲೈನ್ ಗಳನ್ನು ಪರಿಶೀಲಿಸಬೇಕು. ಗ್ರಾಮಾಂತರ ಮಟ್ಟದಲ್ಲಿ ವಿದ್ಯುತ್ ಮಾರ್ಗಗಳ ಪರಿಶೀಲನೆ ನಡೆಸುವಂತೆ ಹೇಳಿದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗಮಂಡಲಕ್ಕೆ ಸೇರುವ ಎಲ್ಲಾ ರಸ್ತೆಗಳ ಎರಡೂ ಬದಿಗಳಲ್ಲಿ ಇರಬಹುದಾದ ಅಪಾಯದ ಸ್ಥಿತಿಯಲ್ಲಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ತಲಕಾವೇರಿಯಲ್ಲಿ ವನ್ಯ ಪ್ರಾಣಿಗಳಿಂದ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮವಹಿಸಲು ಸಚಿವರು ಸೂಚಿಸಿದರು.

ದೇವಾಲಯ ವ್ಯವಸ್ಥಾಪನಾ ಸಮಿತಿಯವರು ತಲಕಾವೇರಿ ಕ್ಷೇತ್ರದಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆ ಮತ್ತು ಶಾಮಿಯಾನ ಆಸನದ ವ್ಯವಸ್ಥೆ, ಶಿμÁ್ಠಚಾರ ವ್ಯವಸ್ಥೆ ಧ್ವನಿ ವರ್ಧಕದ ಸೂಕ್ತ ವ್ಯವಸ್ಥೆ ಮಾಡುವಂತೆ ಸಚಿವರು ತಿಳಿಸಿದರು.

ಅಕ್ಟೋಬರ್ ಮಾಹೆಯಲ್ಲಿ ತಲಕಾವೇರಿಯ ಕಾವೇರಿ ತುಲಾ ಸಂಕ್ರಮಣ ಪ್ರಯುಕ್ತ ನಡೆಯುವ ಜಾತ್ರಾ ಕಾರ್ಯಕ್ರಮಗಳ ವಿವರ ಇಂತಿದೆ.ಅಕ್ಟೋಬರ್ 4 ರಂದು ಬೆಳಗ್ಗೆ 10:33 ಗಂಟೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ. ಅ.14 ರಂದು ಬೆಳಗ್ಗೆ 11.45 ಗಂಟೆಗೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು ಹಾಗೂ ಅದೇ ದಿನ ಸಂಜೆ 5.15 ಗಂಟೆಗೆ ಸಲ್ಲುವ ಮೀನ ಲಗ್ನದಲ್ಲಿ ಕಾಣಿಕೆ ಡಬ್ಬಿಗಳನ್ನು ಇರಿಸಲಾಗುತ್ತದೆ. ಅಕ್ಟೋಬರ್ 17 ರಂದು ಬೆಳಗ್ಗೆ 7.03 ಗಂಟೆಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತೀರ್ಥೋದ್ಭವ ನಡೆಯಲಿದೆ. ತಲಕಾವೇರಿ-ಭಾಗಮಂಡಲ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಇತರರು ಇದ್ದರು.