ಚಿತ್ರದುರ್ಗ: ಇಡ್ಲಿ ತಟ್ಟೆಗೆ ಪ್ಲಾಸ್ಟಿಕ್ ಶೀಟ್ ಬಳಸಿ ದಿನ ನಿತ್ಯವೂ ಇಡ್ಲಿ ಬೇಯಿಸಿ ಮಾರಾಟ ಮಾಡುತ್ತಿದ್ದ ಬಸವೇಶ್ವರ ಹಾಟ್‌ಚಿಪ್ಸ್ ಅಂಡ್ ಕಾಂಡಿಮೆಂಟ್ಸ್ ಮೇಲೆ ನಗರಸಭೆ ಪೌರಾಯುಕ್ತರು ಮತ್ತು ಆರೋಗ್ಯ ನಿರೀಕ್ಷಕರು ಶನಿವಾರ ಧಾಳಿ ನಡೆಸಿ ಅಂಗಡಿ ಲಾಕ್ ಮಾಡಿದರು.

ಲಕ್ಷ್ಮಿಬಜಾರ್‌ನಲ್ಲಿರುವ ವಿ.ಜಿ.ಟೆಕ್ಸ್ ಮುಂಭಾಗ ಪ್ರತಿದಿನವೂ ಬೆಳಗಿನ ಜಾವ ಇಡ್ಲಿ ವಡೆ ತಯಾರಿಸಿ ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲೀಕನಿಗೆ ಇಡ್ಡಿ ಬೇಯಿಸುವ ಪ್ಲೇಟ್‌ಗೆ ವಿಷಕಾರಕ ಪ್ಲಾಸ್ಟಿಕ್ ಶೀಟ್ ಬಳಸಬಾರದು. ಅದಕ್ಕೆ ಬದಲಾಗಿ ಬಟ್ಟೆ ಬಳಸುವಂತೆ ಎಚ್ಚರಿಕೆ ನೀಡಿದ್ದರೂ ಉಡಾಫೆ ಮಾಡಿಕೊಂಡು ದಿನನಿತ್ಯದಂತೆ ಅಂಗಡಿ ತೆರೆದು ವಹಿವಾಟು ನಡೆಸುತ್ತಿದ್ದ ವೇಳೆ ನಗರಸಭೆ ಪೌರಾಯುಕ್ತರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಬಸವೇಶ್ವರ ಹಾಟ್‌ಚಿಪ್ಸ್ ಅಂಡ್ ಕಾಂಡಿಮೆಂಟ್ಸ್‌ಗೆ ಬೀಜ ಜಡಿದಿದ್ದಾರೆ.

ಪ್ಲಾಸ್ಟಿಕ್ ಬಳಕೆಯನ್ನೇ ಸರ್ಕಾರ ನಿಷೇಧಿಸಿರುವಾಗಿ ಪ್ಲಾಸ್ಟಿಕ್ ಶೀಟ್ ಬಳಸಿ ಇಡ್ಲಿ ಬೇಯಿಸಿ ಮಾರಾಟ ಮಾಡುವುದರಿಂದ ಸೇವಿಸುವವರು ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳಿವೆ. ಹಾಗಾಗಿ ಧಾಳಿ ನಡೆಸಿ ಅಂಗಡಿಗೆ ಬೀಗ ಹಾಕಲಾಗಿದೆ ಎಂದು ನಗರಸಭೆ ಪೌರಾಯುಕ್ತರಾದ ಚಂದ್ರಪ್ಪನವರು ಪತ್ರಿಕೆಗೆ ತಿಳಿಸಿದರು.

ಹೆಲ್ತ್ ಇನ್ಸ್‌ಪೆಕ್ಟರ್ ಕಾಂತರಾಜ್, ಪರಿಸರ ಇಂಜಿನಿಯರ್ ಜಾಫರ್ ಮತ್ತು ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು