ದುಬೈ: ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೆಲುವಿನ ದಾಖಲೆ ಬರೆದಿದೆ. ಮಂಗಳವಾರ (ನವೆಂಬರ್ 10) ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಜಯ ಗಳಿಸಿದ ಮುಂಬೈ ಇಂಡಿಯನ್ಸ್ ಐದನೇ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಆಯ್ದುಕೊಂಡ ಡೆಲ್ಲಿ ಕ್ಯಾಪಿಟಲ್ಸ್‌ನ ಟಾಪ್ ಬ್ಯಾಟಿಂಗ್ ಆರ್ಡರ್‌ನಿಂದ ಉತ್ತಮ ಬ್ಯಾಟಿಂಗ್ ಬರಲಿಲ್ಲ. ಮಾರ್ಕಸ್ ಸ್ಟೋಯ್ನಿಸ್ 0, ಶಿಖರ್ ಧವನ್ 15, ಅಜಿಂಕ್ಯ ರಹಾನೆ 2, ರಿಷಭ್ ಪಂತ್ 56 (38 ಎಸೆತ), ಶಿಮ್ರನ್ ಹೆಟ್ಮೈಯರ್ 5, ಅಕ್ಸರ್ ಪಟೇಲ್ 9, ಶ್ರೇಯಸ್ ಐಯ್ಯರ್ 65 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 156 ರನ್ ಗಳಿಸಿತು.

ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಡೆಲ್ಲಿ ನೀಡಿದ ಗುರಿ ಸವಾಲಿನದ್ದು ಎನಿಸಲಿಲ್ಲ. ನಾಯಕ ರೋಹಿತ್ ಶರ್ಮಾ 68 (51 ಎಸೆತ), ಕ್ವಿಂಟನ್ ಡಿ ಕಾಕ್ 20, ಸೂರ್ಯಕುಮಾರ್ ಯಾದವ್ 19, ಕೀರನ್ ಪೊಲಾರ್ಡ್ 9, ಹಾರ್ದಿಕ್ ಪಾಂಡ್ಯ 3, ಇಶಾನ್ ಕಿಶನ್ 33 ರನ್‌ನೊಂದಿಗೆ 18.4 ಓವರ್‌ಗೆ 5 ವಿಕೆಟ್ ಕಳೆದು 157 ರನ್ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಟ್ರೆಂಟ್ ಬೌಲ್ಟ್ 3, ಜಯಂತ್ ಯಾದವ್ 1, ನಾಥನ್ ಕೌಲ್ಟರ್ ನೈಲ್ 2 ವಿಕೆಟ್ ಪಡೆದರು. ಮುಂಬೈ ಇನ್ನಿಂಗ್ಸ್‌ನಲ್ಲಿ ಕಾಗಿಸೊ ರಬಾಡ 1, ಅನ್ರಿಕ್ ನಾರ್ಟ್ಜೆ 2, ಮಾರ್ಕಸ್ ಸ್ಟೋಯ್ನಿಸ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು.