ಚಿತ್ರದುರ್ಗ: ಡೆಂಗೀ, ಚಿಕನ್‌ಗುನ್ಯಾ ನಿವಾರಣೆಗೆ ನಿಗಧಿತವಾದ ಚಿಕಿತ್ಸೆ ಇಲ್ಲ ಅಲ್ಲದೆ ಅದಕ್ಕೆ ನಿರ್ಧಿಷ್ಠವಾದ ಔಷಧಿ ಸಹಾ ಇಲ್ಲವಾದ್ದರಿಂದ ಮುಂಜಾಗ್ರತೆಯನ್ನು ವಹಿಸುವುದರ ಮೂಲಕ ರೋಗವನ್ನು ನಿಯಂತ್ರಣ ಮಾಡಬೇಕಿದೆ ಎಂದು ಅಪರ ಜಿಲ್ಲಾಧಿಕಾರಿ ರಾಘವೇಂದ್ರ ತಿಳಿಸಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಡೆಂಗೀ ಮತ್ತು ಚಿಕನ್‌ಗುನ್ಯಾ ಪ್ರಕರಣ ಹೆಚ್ಚಾಗಿದ್ದು, ಈ ಸಂಬಂಧ ಸಾರ್ವಜನಿಕರಿಗೆ ತಿಳುವಳಿಕೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕು.ಕ. ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೊಂದು ಸವಾಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಆರೋಗ್ಯ ಇಲಾಖೆ ಜೊತೆಗೆ ವಿವಿಧ ಇಲಾಖೆಗಳು ಕೈಜೋಡಿಸಿ ಡೆಂಗ್ಯೂ ಮತ್ತು ಚಿಕನ್‌ಗುನ್ಯಾದಂತಹ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ನಾಗರಿಕರು ತಮ್ಮ ಸುತ್ತ-ಮುತ್ತಲಿನ ವಾತಾವರಣದ ಸ್ವಚ್ಛತೆ ಕಾಪಾಡಿಕೊಳ್ಳುವುದು ಸೂಕ್ತವಾದ ಪರಿಹಾರವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂತಹ ರೋಗಗಳನ್ನು ಬಾರದ ರೀತಿಯಲ್ಲಿ ತಡೆಗಟ್ಟಲು ಆರೋಗ್ಯ ಇಲಾಖೆ ಸೇರಿದಂತೆ, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಹ ಮನೆ-ಮನೆಗೆ ಭೇಟಿನೀಡಿ ಸಾಂಕ್ರಾಮಿಕ ರೋಗ ತಡೆಯ ಜಾಗೃತಿ ಹಾಗೂ ಸ್ವಚ್ಛತೆ ನಿರ್ವಹಣೆಯ ಬಗ್ಗೆ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.
ಡೆಂಗ್ಯೂ ರೋಗಕ್ಕೆ ಸಂಬಂಧಿಸಿದಂತೆ ಇತ್ತೀಚಿನ ವರದಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೨೩೦ ಪ್ರಕರಣಗಳು ದಾಖಲಾಗಿವೆ. ಆದರೆ ರೋಗವೇ ಬಾರದಂತೆ ಯಾವ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಹಾಗೂ ರೋಗದಿಂದಾಗುವ ಪರಿಣಾಮದ ಕುರಿತು ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್‌ಗುನ್ಯಾ ರೋಗಳಿಗೆ ಕಡಿವಾಣ ಹಾಕಬೇಕಾದರೆ ಎಲ್ಲಾ ಇಲಾಖೆಯವರು ಒಟ್ಟಾಗಿ ಭಾಗವಹಿಸಿ ಇಂತಹ ರೋಗಗಳನ್ನು ತಡೆಗಟ್ಟುವುದಕ್ಕೆ ಜಾಗೃತಿ ಮೂಡಿಸಬೇಕು. ಸಮಾಜದ ಎಲ್ಲ ಮುಖಂಡರೂ ಒಟ್ಟಾಗಿ ಒಳ್ಳೆಯ ಮನೋಭಾವನೆಯಿಂದ ತಮ್ಮ ಮನೆ, ನೆರೆಹೊರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಡೆಂಗ್ಯೂ ರೋಗ ನಿಯಂತ್ರಿಸುವುದಕ್ಕೆ ಸ್ವಚ್ಛತೆ ಮುಖ್ಯವಾಗಿದೆ. ನಾಗರಿಕರಲ್ಲಿ ಸರಿಯಾಗಿ ತಿಳುವಳಿಕೆ ಇಲ್ಲದಿರುವುದರಿಂದ ಸ್ವಚ್ಛತೆ ಬಗೆ ಆಶಾ ಕಾರ್ಯಕರ್ತರು ಮನೆಮನೆಗೆ ತೆರಳಿ ಅವರಿಗೆ ಜಾಗೃತಿ ಮೂಡಿಸುವ ಜೊತೆಯಲ್ಲಿ ಸರ್ವೆ ಮಾಡಲಾಗುತ್ತದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ: ಜಯಮ್ಮ ತಿಳಿಸಿದರು.