ಚಿತ್ರದುರ್ಗ: ಟಿಪ್ಪು ಅಜೆಂಡಾ ಇಟ್ಟುಕೊಂಡು ಧರ್ಮ ಜಾತಿಗಳ ವಿರುದ್ದ ದ್ವೇಷ ಬಿತ್ತುತ್ತಿರುವ ಕೋಮುವಾದಿ ಬಿಜೆಪಿ ವಿರುದ್ದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂಆಲಿ ಎಚ್ಚರಿಸಿದರು.

ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಟಿಪ್ಪು ಒಬ್ಬ ಮತಾಂಧ, ಕನ್ನಡ ವಿರೋಧಿ ಎಂದು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ ಏಕಾಏಕಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿ ಈಗ ಪಠ್ಯದಿಂದ ಟಪ್ಪುವನ್ನು ತೆಗೆದು ಹಾಕಲು ಹೊರಟಿರುವುದನ್ನು ನಾವುಗಳು ಸಹಿಸುವುದಿಲ್ಲ. ಟಿಪ್ಪು ಜಯಂತಿಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ ಮತ್ತು ಆರ್.ಎಸ್.ಎಸ್.ನವರು ಈ ಹಿಂದೆ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದನ್ನು ಮರೆತಂತಿದೆ. ನ.೧೦ ರಂದು ಟಿಪ್ಪು ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವವನ್ನು ಜೊತೆಯಲ್ಲಿ ಆಚರಿಸಿ ನಂತರ ಟಿಪ್ಪು ಅಭಿಮಾನಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋಮುವಾದಿ ಬಿಜೆಪಿ ವಿರುದ್ದ ಹೋರಾಟಕ್ಕಿಳಿಯುತ್ತೇವೆ ಎಂದರು.

ಕೆ.ಆರ್.ಎಸ್.ಅಣೆಕಟ್ಟೆಗೆ ಮೊದಲು ನೀಲನಕ್ಷೆ ತಯಾರಿಸಿದ್ದು, ಟಿಪ್ಪು. ಕರ್ನಾಟಕದಲ್ಲಿ ಪ್ರಥಮವಾಗಿ ರೇಷ್ಮೆಯನ್ನು ಪರಿಚಯಿಸಿ ಮೂವತ್ತೈದು ಲಕ್ಷ ಕುಟುಂಬಗಳಿಗೆ ಜೀವನಕ್ಕೆ ದಾರಿ ಮಾಡಿಕೊಟ್ಟರು. ದಲಿತರಿಗೆ ಭೂ ಒಡೆತನ, ಅಂಚೆ ಸೇವೆಯನ್ನು ಮೊಟ್ಟ ಮೊದಲು ಆರಂಭಿಸಿದವರು ಟಿಪ್ಪುಸುಲ್ತಾನ್ ಎನ್ನುವುದನ್ನು ಬಿಜೆಪಿಯವರು ಮರೆಯಬಾರದು ಎಂದು ನೆನಪಿಸಿದರು.

ಆಫ್ಘಾನಿಸ್ಥಾನದಿಂದ ಅಮೃತ್ ಮಹಲ್ ಎತ್ತುಗಳು, ಟರ್ಕಿಯಿಂದ ಬನ್ನೂರು ಕುರಿಗಳನ್ನು ತಂದು ಕೃಷಿಕರಿಗೆ ಉತ್ತೇಜನ ನೀಡಿದ್ದು, ಟಿಪ್ಪು. ಮದ್ಯಪಾನ ನಿಷೇಧ, ರೈತರಿಗೆ ಠಕಾವಿ ಸಾಲ, ಗಂಧದ ಎಣ್ಣೆ ತಯಾರಿಕೆ, ೮೫೦ ದೇವಸ್ಥಾನಗಳಿಗೆ ದೇಣಿಗೆ, ರಾಕೆಟ್ ತಂತ್ರಜ್ಞಾನ ಮೊಟ್ಟಮೊದಲು ಕಂಡಿಹಿಡಿದದ್ದು, ಇಷ್ಟೆಲ್ಲಾ ಕೊಡುಗೆ ಬಿಜೆಪಿಗೇಕೆ ಕಾಣುತ್ತಿಲ್ಲ. ಚುನಾವಣೆ ಬಂದಾಗ ರಾಮಮಂದಿರ, ಪಾಕಿಸ್ತಾನ, ಟಿಪ್ಪುವನ್ನು ಮುಂದಿಟ್ಟುಕೊಂಡು ಅಧಿಕಾರ ನಡೆಸಲು ನಾವುಗಳು ಬಿಡುವುದಿಲ್ಲ ಬೀದಿಗಿಳಿದು ಹೋರಾಟ ಮಾಡುತ್ತೇವೆಂದು ತಿಳಿಸಿದರು.

ಎಂ.ಜಯಣ್ಣ ಮಾತನಾಡಿ ಟಿಪ್ಪು ಜಯಂತಿಯನ್ನು ರದ್ದುಪಡಿಸಿರುವ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಕೋಮುವಾದಿ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಟಿಪ್ಪು ಮುಸ್ಲಿಂ ರಾಜ ಎನ್ನುವ ಕಾರಣಕ್ಕೆ ಅವರ ಜಯಂತಿಯನ್ನು ರದ್ದುಗೊಳಿಸಿರುವುದು ಘನ ಘೋರ ಅನ್ಯಾಯ. ಅಸೆಂಬ್ಲಿಯಲ್ಲಿ ಚರ್ಚಿಸಿ ನಿರ್ಣಯಿಸಬೇಕಿತ್ತು. ಯಾರ ಸಲಹೆಯನ್ನು ಕೇಳದೆ ಒನ್ ಮ್ಯಾನ್ ಶೋ ಪ್ರದರ್ಶಿಸುತ್ತಿರುವುದನ್ನು ಕಟುವಾಗಿ ಟೀಕಿಸಿದರು.

ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಐದು ಲಕ್ಷ ಮನೆಗಳು ಬಿದ್ದಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನು ಮರೆಮಾಚಲು ಟಿಪ್ಪು ವಿವಾದ ತೆಗೆದಿದ್ದಾರೆ. ಅನೇಕ ಜನಪರ ಕೆಲಸಗಳನ್ನು ಮಾಡಿರುವ ಟಿಪ್ಪು ಜಯಂತಿ ರದ್ದುಪಡಿಸಿದಂತೆ ಬೇರೆ ಎಲ್ಲಾ ಜಯಂತಿಗಳನ್ನು ರದ್ದುಪಡಿಸಲಿ ಎಂದರು.
ಅಹಿಂದ ಹೋರಾಟಗಾರ ಮುರುಘರಾಜೇಂದ್ರ ಒಡೆಯರ್ ಮಾತನಾಡುತ್ತ ಟಿಪ್ಪು ಮುಸ್ಲಿಂ ದೊರೆ ಎನ್ನುವ ಏಕೈಕ ಕಾರಣವನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ರದ್ದುಪಡಿಸಿ ಹಿಂದು ಮುಸ್ಲಿಂರ ನಡುವೆ ಕೋಮುಭಾವನೆಯನ್ನು ಕೆರಳಿಸುತ್ತಿದೆ. ಇದರ ವಿರುದ್ದ ಹೋರಾಟಕ್ಕಿಳಿಯುವುದಾಗಿ ಹೇಳಿದರು.

ನಗರಸಭೆ ಮಾಜಿ ಉಪಾಧ್ಯಕ್ಷ ಜಮೀರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.