ಚಿತ್ರದುರ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜು.28, 29 ರಂದು ತ.ರಾ.ಸು.ರಂಗಮಂದಿರಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ ತಿಳಿಸಿದರು.
ಐಶ್ವರ್ಯ ಫೋರ್ಟ್‍ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ವಿಧಾನಸಭೆ ಚುನಾವಣೆ ನಿಮಿತ್ತ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿತ್ತು. ಹಾಗಾಗಿ ಪರಿಷತ್ ಸಭೆ ಸೇರಿ ಎರಡು ದಿನಗಳ ಕಾಲ ಚಿತ್ರದುರ್ಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಸಮ್ಮೇಳನದ ಅಧ್ಯಕ್ಷರಾಗಿ ಚಿಂತಕರಾದ ಡಾ.ಬಂಜಗೆರೆ ಜಯಪ್ರಕಾಶ್‍ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೊಳಲ್ಕೆರೆ ರಸ್ತೆಯಲ್ಲಿರುವ ಸಂಗೊಳ್ಳಿರಾಯಣ್ಣ ವೃತ್ತದಿಂದ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆ ಮೂಲಕ ರಂಗಮಂದಿರಕ್ಕೆ ಕರೆತರಲಾಗುವುದು. ಈ ಸಂಬಂಧ ಶಾಸಕರು ಹಾಗೂ ಸಾಹಿತ್ಯಾಸ್ತರ ಜೊತೆ ಮಾತನಾಡಿರುವುದಾಗಿ ಹೇಳಿದರು.
ಸಮ್ಮೇಳನದಲ್ಲಿ ಕೃಷಿಗೋಷ್ಟಿ, ವಚನಗೋಷ್ಟಿ, ಬುಡಕಟ್ಟು ಸಂಸ್ಕøತಿ ಗೋಷ್ಟಿ ನಡೆಸಲಾಗುವುದು. ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಎಸ್.ಜಿ.ಸಿದ್ದರಾಮಯ್ಯ ಇವರುಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು. ರಾಜ್ಯದಲ್ಲಿ 28 ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಭೀತಿಯನ್ನು ಎದುರಿಸುತ್ತಿರುವುದರಿಂದ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಹೆಚ್ಚಿನ ಒತ್ತುಕೊಡಲಾಗುವುದು. ಎಲ್ಲಾ ಸವಾಲುಗಳನ್ನು ಮುಂದಿಟ್ಟುಕೊಂಡು ಶಿಕ್ಷಣಕ್ಕೆ ಸಂಬಂಧಿಸಿದ ಗೋಷ್ಟಿಯು ಸಮ್ಮೇಳನದಲ್ಲಿರುತ್ತದೆ. ಜಿಲ್ಲಾ ಸಮ್ಮೇಳನ ನಂತರ ಮಕ್ಕಳ ಹಾಗೂ ಮಹಿಳಾ ಸಮ್ಮೇಳನವನ್ನು ಮುಂದೆ ನಡೆಸುವುದಾಗಿ ಡಾ.ದೊಡ್ಡಮಲ್ಲಯ್ಯ ನುಡಿದರು.
ಅಂದಾಜು ಎರಡು ಸಾವಿರ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಸಾರ್ವಜನಿಕರಿಂದ ಯಾವುದೇ ದೇಣಿಗೆಯನ್ನು ಸಮ್ಮೇಳನಕ್ಕೆಂದು ಸಂಗ್ರಹಿಸಲಾಗುವುದಿಲ್ಲ. ಜಿ.ಪಂ.ನೀಡುವ ಅನುದಾನ ಹಾಗೂ ಸಾಹಿತ್ಯ ಪರಿಷತ್‍ನಿಂದ ನೀಡುವ ಹಣವನ್ನಷ್ಟೆ ಸಮ್ಮೇಳನಕ್ಕೆ ಖರ್ಚು ಮಾಡಲಾಗುವುದು. ಜಿಲ್ಲೆಗೆ ಅತ್ಯವಶ್ಯಕವಾಗಿ ಭದ್ರಾಮೇಲ್ದಂಡೆ ಯೋಜನೆ ಜಾರಿಯಾಗಬೇಕಾಗಿರುವುದರಿಂದ ತಜ್ಞರು ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನ ರಾಜ್ಯಾಧ್ಯಕ್ಷರ ಸಲಹೆ ಮೇರೆಗೆ ಚಿತ್ರದುರ್ಗದಲ್ಲಿ ಕನ್ನಡ ಭವನ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಪಡುತ್ತಿದ್ದೇವೆ ಇದಕ್ಕೆ ಸಾಹಿತ್ಯಾಸ್ತಕರು ಹಾಗೂ ಪರಿಷತ್‍ನವರ ಸಹಕಾರ ಅತ್ಯವಶ್ಯಕ ಎಂದು ಮನವಿ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳಾದ ನಾಗರಾಜ್, ಮಹಂತೇಶ್, ಷರೀಫಾಬಿ, ಗೋವಿಂದಪ್ಪ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.