ಚಿತ್ರದುರ್ಗ: ಒಡಂಬಡಿಕೆ ಪ್ರಕಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಹದಿನೈದು ತಿಂಗಳು ಕಳೆದರೂ ಇನ್ನು ರಾಜಿನಾಮೆ ನೀಡದೆ ವರಿಷ್ಠರ ಆದೇಶವನ್ನು ಧಿಕ್ಕರಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಿರುವ ಸೌಭಾಗ್ಯ ಬಸವರಾಜನ್, ಉಪಾಧ್ಯಕ್ಷೆ ಸುಶೀಲಮ್ಮ ಇವರುಗಳು ಕೂಡಲೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಪಕ್ಷದಿಂದ ಉಚ್ಚಾಟಿಸಿ ಅಧಿಕಾರದಿಂದ ಕೆಳಗಿಳಿಸುವಂತೆ ಕಾಂಗ್ರೆಸ್‌ನ ಜಿ.ಪಂ.ಸದಸ್ಯರುಗಳೇ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಿದರು.

ಎರಡು ತಿಂಗಳಿಗೊಮ್ಮೆ ಸಾಮಾನ್ಯ ಸಭೆ ಕರೆಯಬೇಕೆಂಬ ನಿಯಮವಿದ್ದರೂ ಅದ್ಯಾವುದನ್ನು ಲೆಕ್ಕಿಸದೆ ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ನಾಮಕಾವಸ್ಥೆ ಅಧ್ಯಕ್ಷರಾಗಿದ್ದಾರೆ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ಆಗಿಲ್ಲ, ನಮ್ಮ ಕ್ಷೇತ್ರದಲ್ಲಿ ಮತ ನೀಡಿ ಗೆಲ್ಲಿಸಿದವರು ನಮ್ಮನ್ನು ಪ್ರಶ್ನಿಸುತ್ತಾರೆ ಎಂದು ಜಿ.ಪಂ.ಸದಸ್ಯ ಶಿವಮೂರ್ತಿ ಅಧ್ಯಕ್ಷೆ ವಿರುದ್ದ ಕಿಡಿಕಾರಿದರು.

ಪಕ್ಷದ ಆಂತರಿಕ ಒಪ್ಪಂದದಂತೆ ಹದಿನೈದು ತಿಂಗಳ ಅವಧಿ ಮುಗಿದ ಮೇಲೆ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕಿತ್ತು. ನ್ಯಾಯಲಯಕ್ಕೆ ಹೋಗುವ ಪ್ರಮಯವೇ ಇರಲಿಲ್ಲ. ಮೂರು ದಿನದೊಳಗೆ ಪಕ್ಷದಿಂದ ಸೌಭಾಗ್ಯ ಬಸವರಾಜನ್‌ರನ್ನು ಉಚ್ಚಾಟನೆ ಮಾಡಿ ಬೇರೆಯವರಿಗೆ ಅಧಿಕಾರ ಕೊಡದಿದ್ದರೆ ಕಾಂಗ್ರೆಸ್ ಕಚೇರಿ ಎದುರು ಧರಣಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದರು.

ಹೊಸದುರ್ಗ ತಾಲೂಕಿನ ಬಾಗೂರು ಕ್ಷೇತ್ರದ ಜಿ.ಪಂ.ಸದಸ್ಯೆ ವಿಶಾಲಾಕ್ಷಿ ನಟರಾಜ್ ಧರಣಿಯನ್ನುದ್ದೇಶಿಸಿ ಮಾತನಾಡಿ ಸೌಭಾಗ್ಯ ಬಸವರಾಜನ್ ಜಿ.ಪಂ.ಅಧ್ಯಕ್ಷೆಯಾಗಿ ೧೯ ತಿಂಗಳಾಗಿದೆ. ಮಾತಿನ ಪ್ರಕಾರ ಹದಿನೈದು ತಿಂಗಳ ನಂತರ ರಾಜೀನಾಮೆ ಕೊಡಬೇಕಿತ್ತು. ಹತ್ತೊಂಬತ್ತು ತಿಂಗಳಲ್ಲಿ ಕೇವಲ ಮೂರು ಸಾಮಾನ್ಯ ಸಭೆ ನಡೆಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಜಿ.ಪಂ.ನ ೨೨ ಸದಸ್ಯರು ಸಹಿ ಮಾಡಿ ಉಚ್ಚಾಟನೆಗೆ ವರಿಷ್ಠರಿಗೆ ಶಿಫಾರಸ್ಸು ಮಾಡಿದ್ದರೂ ಯಾವುದಕ್ಕೂ ಕ್ಯಾರೆ ಎನ್ನದೆ ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಮೊಂಡುತನಕ್ಕೆ ಬಿದ್ದಿದ್ದಾರೆ. ಇನ್ನು ಮೂರು ದಿನದೊಳಗೆ ಅವರ ರಾಜೀನಾಮೆ ಕೊಡಿಸದಿದ್ದರೆ ನಾವುಗಳೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಸವಾಲು ಹಾಕಿದರು.

ಜಿ.ಪಂ.ಸದಸ್ಯರುಗಳಾದ ಬಿ.ಯೋಗೇಶ್‌ಬಾಬು, ಬಿ.ಪಿ.ಪ್ರಕಾಶ್‌ಮೂರ್ತಿ, ಕೌಸಲ್ಯತಿಪ್ಪೇಸ್ವಾಮಿ, ಶಶಿಕಲಸುರೇಶ್‌ಬಾಬು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಂದಿಕೆರೆ ಸುರೇಶ್‌ಬಾಬು ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಟಿ.ಜಗದೀಶ್ ಈಗಾಗಲೆ ಸೌಭಾಗ್ಯ ಬಸವರಾಜನ್‌ರವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಎಲ್ಲರೂ ಸೇರಿ ನಾಯಕರಿಗೆ ಶಿಫಾರಸ್ಸು ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಚೇರಿ ಎದುರು ಪ್ರತಿಭಟನೆ ನಡೆಸಬೇಡಿ ಎಂದು ಧರಣಿನಿರತರಲ್ಲಿ ಮನವಿ ಮಾಡಿದಾಗ ಇನ್ನು ಮೂರು ದಿನಗಳೊಳಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ಉಚ್ಚಾಟಿಸದಿದ್ದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಸಿ ಪ್ರತಿಭಟನೆಯನ್ನು ಕೈಬಿಟ್ಟರು.