ಚಿತ್ರದುರ್ಗ: ಜಿಲ್ಲೆಯಲ್ಲಿ ಹೆಚ್ಚಾಗಿ ಶೇಂಗಾ ಬೆಳೆಯನ್ನು ಬೆಳೆಯಲಾಗಿದ್ದು ರೈತರಿಂದ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.

 ಶೇಂಗಾ ಉತ್ಪನ್ನವನ್ನು ರೈತರಿಂದ ನೇರವಾಗಿ ಖರೀದಿಸಲಾಗುತ್ತಿದ್ದು ಕರ್ನಾಟಕ ಆಯಿಲ್ ಫೆಡರೇಷನ್ ಮೂಲಕ ಕೆಓಎಫ್ ಪ್ರತಿ ಕ್ವಿಂಟಾಲ್‍ಗೆ 5275 ರೂ.ಗಳಿಗೆ ಖರೀದಿ ಮಾಡಲಾಗುತ್ತಿದೆ.

 ಶೇಂಗಾ ಖರೀದಿಗಾಗಿ ಜಿಲ್ಲೆಯ 12 ಕೇಂದ್ರಗಳ ಮೂಲಕ ಖರೀದಿಸಲಾಗುತ್ತಿದೆ. ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ, ನಿ. ಮೂಲಕ ಖರೀದಿಸಲಾಗುತ್ತಿದೆ. ಚಳ್ಳಕೆರೆ ತಾ; ತಿಮ್ಮಣ್ಣನಾಯಕನಕೋಟೆ, ರಾಮಜೋಗಿಹಳ್ಳಿ, ದೇವರೆಡ್ಡಿಹಳ್ಳಿ, ತಿಮ್ಮಪ್ಪಯ್ಯನಹಳ್ಳಿ, ಸಾಣೆಕೆರೆ ಹಾಗೂ ಎಪಿಎಂಸಿ ಚಳ್ಳಕೆರೆ, ಹಿರಿಯೂರು ತಾ; ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘ.ನಿ ಯರಬಳ್ಳಿ, ಆರನಕಟ್ಟೆ, ಧರ್ಮಪುರ, ಚಿತ್ರದುರ್ಗ ತಾ; ತುರುವನೂರು ಹಾಗೂ ಮೊಳಕಾಲ್ಮುರು ತಾ; ಚಿಕ್ಕೋಬನಹಳ್ಳಿ, ಎ.ಪಿ.ಎಂ.ಸಿ ರಾಂಪುರ ಈ ಖರೀದಿ ಕೇಂದ್ರಗಳಲ್ಲಿ ಶೇಂಗಾ ಖರೀದಿಸಲಾಗುತ್ತ್ತಿದೆ.

 ರೈತರು ನವಂಬರ್ 21 ರೊಳಗಾಗಿ ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ಇದರ ಜೊತೆಯಲ್ಲಿ ಖರೀದಿ ಮಾಡಲಿದ್ದು 2021 ರ ಜನವರಿ 1 ರ ವರೆಗೆ ಖರೀದಿ ಮಾಡಲಾಗುತ್ತದೆ. ಪ್ರತಿ ಎಕರೆಗೆ ಗರಿಷ್ಠ 3 ಕ್ವಿಂಟಾಲ್‍ನಂತೆ ಪ್ರತಿ ರೈತರಿಂದ ಗರಿಷ್ಠ 15 ಹದಿನೈದು ಕ್ವಿಂಟಾಲ್ ಶೇಂಗಾ ಖರೀದಿಸಲಾಗುತ್ತದೆ. ಆಯಾ ರೈತರ ಹೆಸರಿಗೆ ಮಾತ್ರ ಅವರ ಬ್ಯಾಂಕ್ ಖಾತೆಗೆ ಖರೀದಿ ಹಣವನ್ನು ವರ್ಗಾವಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.