ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮಳೆಯ ಪ್ರಮಾಣ ಆಧರಿಸಿ, ಇಲ್ಲಿನ ಹವಾಗುಣಕ್ಕೆ ಅನುಗುಣವಾಗಿ ರೈತರು ಕೃಷಿ ಚಟುವಟಿಕೆ ಕೈಗೊಂಡು, ಆರ್ಥಿಕವಾಗಿ ಸಬಲರಾಗಲು ಕೃಷಿ ಹಾಗೂ ತೋಟಗಾರಿಕೆ ತಜ್ಞರು ಅಧ್ಯಯನ ಕೈಗೊಂಡು ಸಕಾಲಿಕವಾಗಿ ವರದಿ ನೀಡುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೃಷಿಕರ ಆದಾಯ ದ್ವಿಗುಣಗೊಳಿದುವ ಕುರಿತು ಮಾರ್ಗೋಪಾಯ ಕಂಡುಕೊಳ್ಳುವ ಸಲುವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿತ್ರದುರ್ಗ ಜಿಲ್ಲೆ ಮಳೆಯ ಕೊರತೆಯಿಂದ ಇಲ್ಲಿನ ರೈತರ ಕೃಷಿ ಬದುಕು ವರ್ಷದಿಂದ ವರ್ಷಕ್ಕೆ ಆತಂಕದಲ್ಲಿಯೇ ಮುಂದುವರೆದಿದೆ. ಜಿಲ್ಲೆಯಲ್ಲಿ ನೀರಾವರಿಯ ಶಾಶ್ವತ ಮೂಲಗಳು ಲಭ್ಯವಿಲ್ಲ. ರೈತರು ಸಂಪೂರ್ಣವಾಗಿ ಮಳೆಯನ್ನೇ ಆಶ್ರಯಿಸಿದ್ದು, ಪ್ರತಿ ವರ್ಷ ಮಳೆಯ ಕೊರತೆಯಿಂದ ಬಿತ್ತಿದ ಬೆಳೆ ರೈತನ ಕೈ ಸೇರುತ್ತಿಲ್ಲ. ಜಮೀನು ಇದ್ದರೂ ಕೃಷಿ ಚಟುವಟಿಕೆ ನಡೆಸಲಾಗುತ್ತಿಲ್ಲ. ಹೀಗಾಗಿ ಕೃಷಿಯಿಂದ ವಿಮುಖರಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿದ್ದು, ಕೃಷಿಕರಿಗೆ ನೆರವಾಗಿ ಜಿಲ್ಲೆಯಲ್ಲಿ ಕೃಷಿ ರಕ್ಷಿಸುವುದು ಅತಿಮುಖ್ಯವಾಗಿದೆ. ಜಿಲ್ಲೆಯಲ್ಲಿನ ಹಿಂದಿನ ಮಳೆಯ ಪ್ರಮಾಣ, ಹವಾಗುಣ ಹಾಗೂ ಭೂಮಿಯ ಗುಣಮಟ್ಟಕ್ಕೆ ಅನುಗುಣವಾಗಿ ಕೃಷಿ ತಜ್ಞರು, ವಿಜ್ಞಾನಿಗಳು, ಸಂಶೋಧನೆ ನಡೆಸಿ, ಇಲ್ಲಿನ ರೈತರು ಯಾವ ಬೆಳೆಗಳನ್ನು ಬೆಳೆಯಬೇಕು. ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಕೃಷಿ, ಹೈನುಗಾರಿಕೆಯಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳ ಕುರಿತು, ಬೆಳೆಗಳ ಮಾದರಿ ಕುರಿತು ಅಧ್ಯಯನ ನಡೆಯಬೇಕಿದೆ. ಜಿಲ್ಲೆಯಲ್ಲಿ ೬ ತಾಲ್ಲೂಕುಗಳಿದ್ದು, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕಿನಲ್ಲಿರುವ ಹವಾಗುಣ ಹಾಗೂ ಬೆಳೆ ಪದ್ಧತಿ, ಜಿಲ್ಲೆಯ ಉಳಿದ ನಾಲ್ಕು ತಾಲ್ಲೂಕುಗಳಿಗಿಂತಲೂ ಭಿನ್ನವಿದೆ. ಕೆಲವೆಡೆ ಅಡಿಕೆ, ತೆಂಗು, ರಾಗಿ ಮತ್ತಿತರೆ ಬೆಳೆ ಬೆಳೆಯುತ್ತಿದ್ದರೆ, ಉಳಿದೆಡೆ ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ ಬೆಳೆಗಳನ್ನೇ ನೆಚ್ಚಿಕೊಂಡಿದ್ದಾರೆ.

ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಮಳೆಯೂ ಕಡಿಮೆ, ಅಂತರ್ಜಲವೂ ಸಮೃದ್ಧಿಯಾಗಿಲ್ಲ. ಇಲ್ಲಿ ಅನೇಕ ವರ್ಷಗಳಿಂದ ಶೇಂಗಾ ಬೆಳೆ ಬೆಳೆಯಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಇಳುವರಿಯೂ ಕಡಿಮೆಯಾಗಿ ಲಾಭ ತರುತ್ತಿಲ್ಲ. ಖರ್ಚು ಹೆಚ್ಚು, ಆದಾಯ ಕಡಿಮೆ, ಕೂಲಿಕಾರ್ಮಿಕರ ಕೊರತೆ ಹೀಗೆ ನಾನಾ ಸಮಸ್ಯೆಗಳು ಕಂಡುಬರುತ್ತಿವೆ. ಹೀಗೆ ಒಂದೇ ಬಗೆಯ ಬೆಳೆಯನ್ನು ಬೆಳೆಯುವ ಬದಲಿಗೆ, ಪರ್ಯಾಯ ಬೆಳೆ ಬೆಳೆಯುವುದು, ಕೋಳಿಸಾಕಾಣಿಕೆ, ಹೈನುಗಾರಿಕೆ, ಕಡಿಮೆ ನೀರಿನಲ್ಲೂ ಆದಾಯ ತರಬಹುದಾದ ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಕೃಷಿ ಬೆಳೆ ಬೆಳಯುವತ್ತ ರೈತರನ್ನು ಉತ್ತೇಜಿಸಬೇಕಿದೆ. ಅಲ್ಲದೆ ಅವರ ಮನವೊಲಿಸುವ ಕಾರ್ಯವೂ ಆಗಬೇಕಿದೆ. ರೈತರು ಕೇವಲ ಕೃಷಿಯ ಮೇಲೆ ಅವಲಂಬಿತರಾಗದೆ, ಜೊತೆಗೆ ಹೈನುಗಾರಿಕೆ, ಪುಷ್ಪಕೃಷಿ, ಅಣಬೆ ಕೃಷಿ, ಮುಂತಾದ ನಿತ್ಯವೂ ಆದಾಯ ತರಬಲ್ಲ ಉಪಕಸುಬನ್ನು ಕೈಗೊಳ್ಳಲು ರೈತರಿಗೆ ಅಗತ್ಯ ಸಲಹೆ ಹಾಗೂ ಸೌಲಭ್ಯಗಳನ್ನು ಸಂಬಂಧಪಟ್ಟ ಇಲಾಖೆಗಳು ದೊರಕಿಸಬೇಕು.

ಹವಾಗುಣಕ್ಕೆ ಸೂಕ್ತ ಬೆಳೆ ಪದ್ಧತಿ, ಬೇಸಾಯ ಕ್ರಮ, ತಾಂತ್ರಿಕ ನೆರವು, ಬೀಜ, ಗೊಬ್ಬರಗಳ ಬಳಕೆ ಕುರಿತು ಅಧ್ಯಯನ ಕೈಗೊಳ್ಳುವುದು ಅಗತ್ಯವಾಗಿದೆ. ಜೈವಿಕ ಇಂಧನದ ಬೆಳೆಗಳಾದ ಹೊಂಗೆ, ಪೊಂಗಿಮಿಯ, ಬೇವು ಕೃಷಿಗೆ ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ. ಈ ಕೃಷಿ ಅಳವಡಿಸಿಕೊಂಡವರಿಗೆ ಇದರ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನೂ ಕೈಗೊಳ್ಳಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.