ಚಿತ್ರದುರ್ಗ: ಜಿಲ್ಲಾ ಪಂಚಾಯತ್- ಗ್ರಾಮ ಪಂಚಾಯಿತಿ ತಳ ಮಟ್ಟದ ರಾಜಕೀಯ ವಿಕೇಂದ್ರೀಕರಣ. ಅದಕ್ಕೊಂದು ಆಕ್ಟ್ ಇದೆ. ಆಕ್ಟ್ ಇದೆ ಎನ್ನುವುದೇ ಬಹುತೇಕ ಸದಸ್ಯರಿಗೆ ಗೊತ್ತಿದ್ದರೂ ಯಾರು ಆ ಹಾಳೆಯನ್ನು ತಿರುವಿ ಹಾಕಿಲ್ಲ.

ಗಂಡನ ಮುಲಾಜಿಗೋ ಅಥವ ಅಧಿಕಾರಕ್ಕೆ ಜೋತು ಬಿಟ್ಟು ಚುನಾವಣೆಯಲ್ಲಿ ಗೆದ್ದು ಜಿಲ್ಲಾ ಪಂಚಾಯತ್- ಗ್ರಾಮ ಪಂಚಾಯಿತಿ ಸದಸ್ಯರಾಗುತ್ತಾರೆ. ಏನಾದರೂ ಕಾನೂನು ತೊಡಕು ಬಂದಾಗ ಸದಸ್ಯರು ಕಣ್ಣು ಬಾಯಿ ಬಿಡುತ್ತಾರೆ.

ಆದ್ರೆ ನಿನ್ನೆ ಒಂದು ಪ್ರಸಂಗ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಡೆಯಿತು. ಏನಪ್ಪ ಅಂದ್ರೆ ಮುಂದೂಡಿದ ಸಭೆಗೆ ಕೋರಂ ಅವಶ್ಯಕತೆ ಇಲ್ಲ. ಯಾರಾದರೂ ಸದಸ್ಯರು ಕೋರಂ ಬಗ್ಗೆ ಚಕಾರ ಎತ್ತಿದರೆ ಮಾತ್ರ ಆಗ ಸಭೆ ನಡೆಯುವುದಕ್ಕೆ ಕೋರಂ ತೋರಿಸ ಬೇಕಾಗುತ್ತದೆ ಅಂತ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರಿಗೆ ಕೆಲ ಮಾಧ್ಯಮದವರು ಪಾಠ ಮಾಡುತ್ತಿದ್ದರು.

ಗಡಿ ಬಿಡಿಯಲ್ಲಿ ಈ ವಿಚಾರದ ಬಗ್ಗೆ  ಸೌಭಾಗ್ಯ ಬಸವರಾಜನ್ ಅವರು ಈ ವಿಷಯದ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಇಲ್ಲ ಪಂಚಾಯತ್ ಆಕ್ಟ್ ಏನು ಹೇಳುತ್ತದೆ ಅಂತ ಸ್ಪಷ್ಟವಾದ ಮಾಹಿತಿ ಇಲ್ಲ ಅಂತ ಹೇಳಿದರು.

ಬಹುಶಃ ಅಕ್ಷರ ಜ್ಞಾನ ಗೊತ್ತಿಲ್ಲದ, ಹೆಬ್ಬಟ್ಟಿನ ಮಂದಿ ಅಧ್ಯಕ್ಷರು ಆಗಿದ್ದರೆ ಈ ಮಾತು ಹೇಳಿದ್ದರೆ ಪರವಾಗಿಲ್ಲ ಅಂತ ಸುಮ್ಮನಿರ ಬಹುದು. ಆದ್ರೆ ಸೌಭಾಗ್ಯ ಬಸವರಾಜನ್ ಚೆನ್ನಗಿ ಓದಿಕೊಂಡವರು. ಅದರಲ್ಲೂ ಈ ಹಿಂದೆ ಎರಡು ಬಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದವರು. ಇಂತವರಿಗೆ ಆಕ್ಟ್ ಬಗ್ಗೆ ಮಾಹಿತಿ ಇಲ್ಲ ಅಂದ್ರೆ ಜಿಲ್ಲಾ ಪಂಚಾಯತ್ ಸಭೆಯನ್ನು ನಡೆಸುವುದು ಹೇಗಪ್ಪ ಅಂತ ಪ್ರಶ್ನೆ ನಿಮಗೂ ಕಾಡಬಹುದು.

ಈ ಹಿಂದೆ ಜಿಲ್ಲಾ ಪಂಚಾಯತ್ ಸಭೆಗೆ ಬರುವಾಗ ಬಹುತೇಕ ಸದಸ್ಯರು ಆಕ್ಟ್ ಓದಿಕೊಂಡು ಅದನ್ನು ಅಂಡರ್ ಲೈನ್ ಮಾಡಿ ಸಭೆಯಲ್ಲಿ ಪ್ರಶ್ನೆ ಮಾಡಿದ ಸದಸ್ಯರು ಇದ್ದಾರೆ ಆದ್ರೆ ಇಂದು ಅಂತಹ ಸದಸ್ಯರು ಇಲ್ಲವಾಗಿದ್ದಾರೆ. ಒಟ್ಟಿನಲ್ಲಿ ಸದಸ್ಯರು ಮೊದಲು ಆಕ್ಟ್ ಏನು ಹೇಳುತ್ತೆ ಎಂಬುದರ ಬಗ್ಗೆ ಮಾಹಿತಿ ಇದ್ರೆ ಒಳ್ಳಯದಲ್ಲವೆ.?