ಚಿತ್ರದುರ್ಗ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನ ಖಾಸಗಿ ಬಸ್‌ನಿಲ್ದಾಣ ಹಾಗೂ ಸಂತೆಮೈದಾನಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿ ಶುಚಿತ್ವ ಇಲ್ಲದಿರುವುದನ್ನು ಕಂಡು ಸಿಡಿಮಿಡಿಗೊಂಡು ಸ್ವಚ್ಚತೆ ಕಾಪಾಡುವಂತೆ ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.

ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಮಹಾಪರಿನಿರ್ವಾಣದ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಮೆಗೆ ಮಾಲಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ನೇರವಾಗಿ ಖಾಸಗಿ ಬಸ್‌ನಿಲ್ದಾಣಕ್ಕೆ ತೆರಳಿದ ಜಿಲ್ಲಾಧಿಕಾರಿ ಬಸ್‌ನಿಲ್ದಾಣದ ಒಂದು ಮೂಲೆಯಲ್ಲಿ ಹರಡಿಕೊಂಡಿದ್ದ ಕಸದ ರಾಶಿ, ಕೊಳೆತ ಸೊಪ್ಪು ತರಕಾರಿಗಳನ್ನು ವೀಕ್ಷಿಸಿ ಒಂದರೆಡು ದಿನಗಳಲ್ಲಿಯೇ ಬಸ್‌ನಿಲ್ದಾಣ ಹಾಗೂ ಸಂತೆಮೈದಾನದ ಸುತ್ತಮುತ್ತ ಶುಚಿತ್ವ ಕಾಪಾಡಬೇಕು. ಯಾವುದೇ ಕಾರಣ ಹೇಳುವಂತಿಲ್ಲ ಎಂದು ನಗರಸಭೆ ಪರಿಸರ ಇಂಜಿನಿಯರ್ ಜಾಫರ್ ಹಾಗೂ ಸಿಬ್ಬಂದಿಯನ್ನು ಎಚ್ಚರಿಸಿದರು.

ಸಂತೆಮೈದಾನದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಬಿಟ್ಟು ರಸ್ತೆಯ ಎರಡು ಬದಿಗಳಲ್ಲಿ ಸೊಪ್ಪು ತರಕಾರಿಯನ್ನು ಮಾರಾಟ ಮಾಡುತ್ತಿರುವುದರಿಂದ ಒಬ್ಬ ವ್ಯಕ್ತಿಯೂ ಓಡಾಡಲು ಜಾಗವಿಲ್ಲದಷ್ಠು ಕಿರಿದಾಗಿರುವ ರಸ್ತೆಯಲ್ಲಿಯೇ ನಡೆದು ಬಂದ ಜಿಲ್ಲಾಧಿಕಾರಿ ಮೊದಲು ಇದನ್ನು ಸರಿಪಡಿಸಿ. ರಸ್ತೆ ಬದಿಯಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಡಿ. ಯಾರಾದರೂ ರಸ್ತೆಗೆ ಕಸ ತಂದು ಸುರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ನಗರಸಭೆ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿ ನಾನು ಸಡನ್ನಾಗಿ ಬರುತ್ತೇನೆಂಬ ಕಾರಣಕ್ಕೆ ನಗರವನ್ನು ಸ್ವಚ್ಚವಾಗಿಡುವುದು ಬೇಡ. ಸಾರ್ವಜನಿಕರ ಹಿತದೃಷ್ಠಿಯಿಂದ ದಿನನಿತ್ಯವು ನಗರವನ್ನು ಶುಚಿಯಾಗಿಡುವ ಕಡೆ ಗಮನ ಕೊಟ್ಟು ನಗರೋತ್ಥಾನ ಎರಡನೆ ಹಂತದ ಕಾಮಗಾರಿಗಳನ್ನು ಆರಂಭಿಸಿ ನಗರವನ್ನು

ಸುಂದರವಾಗಿಡಬೇಕು ಎಂದು ತಾಕೀತು ಮಾಡಿದರು.  ನಗರಸಭೆ ಪೌರಾಯುಕ್ತ ಚಂದ್ರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.