ಈರೋಡ್ : ಜಿಎಸ್ ಟಿ ಎಲ್ಲಾ ವಲಯಗಳ ಮೇಲೂ ದುಷ್ಪರಿಣಾಮ ಬೀರಿದ್ದು, ಅದನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ಖ್ಯಾತ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಅವರು ಹೇಳಿದ್ದಾರೆ.

ಈರೋಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಕ್ಕಳ್ ನೀತಿ ಮಯ್ಯಂ ಸ್ಥಾಪಕ ಕಮಲ್ ಹಾಸನ್ ಅವರು, ಕೇಂದ್ರ ಸರ್ಕಾರ 500 ಮತ್ತು 1000 ರುಪಾಯಿ ನೋಟುಗಳನ್ನು ನಿಷೇಧಿಸಿದ್ದು ಸರಿ. ಆದರೆ ಅದನ್ನು ಜಾರಿಗೊಳಿಸಿದ ಕ್ರಮ ಸರಿಯಿಲ್ಲ ಎಂದು ಟೀಕಿಸಿದರು.

ನಂತರ ಗೋಪಿಚೆಟ್ಟಿಪಾಳ್ಯಂನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್ ಅವರು, ಯುವಕರು ಎಂಜಿನಿಯರಿಂಗ್ ಮತ್ತು ವೈದ್ಯಕೀಯದ ಮೇಲೆ ಹೆಚ್ಚಿನ ಗಮನ ಹರಿಸುವ ಬದಲು ಕೃಷಿ ಕ್ಷೇತ್ರಕ್ಕೆ ಮರಳಬೇಕು ಎಂದು ಕರೆ ನೀಡಿದರು.

ಫಲವತ್ತಾದ ಭೂಮಿ ಯುವಕರಿಗಾಗಿ ಕಾಯುತ್ತಿದೆ. ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕಲಿತು ಅಳವಡಿಸಿಕೊಳ್ಳಬೇಕು ಎಂದು ಕಮಲ್ ಹಾಸನ್ ಹೇಳಿದರು.