ಬೆಂಗಳೂರು : ಜಾಹೀರಾತು ಹಣ ಇನ್ನೂ ನೀಡದ ಏಜೆನ್ಸಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ದೂರು ಬಂದ ಏಜೆನ್ಸಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಡಾ. ಪಿ.ಎಸ್.ಹರ್ಷ ಅವರು ಹೇಳಿದ್ದಾರೆ.

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಭೇಟಿಯಾದ ನಿಯೋಗದ ಜತೆ ಚರ್ಚೆ ಮಾಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು.

ಕೆಯುಡಬ್ಲ್ಯೂಜೆ ಒತ್ತಾಯದಿಂದ ಸರ್ಕಾರ 56ಕೋಟಿ ರೂ ಹಣ ಬಿಡುಗಡೆ ಮಾಡಿದ್ದು, ವಾರ್ತಾ ಇಲಾಖೆ ಏಜೆನ್ಸಿಗಳಿಗೆ ಹಣ ನೀಡಿದೆ. ಆದರೂ, ಇನ್ನೂ ಕೂಡ ಕೆಲ ಏಜೆನ್ಸಿಗಳು ಪತ್ರಿಕೆಗಳಿಗೆ ಹಣ ನೀಡಿಲ್ಲ ಜಿಲ್ಲೆಗಳಿಂದ ದೂರುಗಳು ಬರುತ್ತಿವೆ. ಏಜೆನ್ಸಿಗಳ ಮೊಂಡುತನಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದಾಗ ಈ ರೀತಿಯಲ್ಲಿ ಪ್ರತಿಕ್ರಿಯಿಸಿದರು.

ವಾರ್ತಾ ಇಲಾಖೆ ಪತ್ರಕರ್ತರಿಗಾಗಿಯೇ ಇರುವ ಇಲಾಖೆ. ಪತ್ರಕರ್ತರ ಮತ್ತು ಸರ್ಕಾರದ ಕೊಂಡಿಯಾಗಿ ಇಲಾಖೆ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಜಾಹೀರಾತು ಏಜೆನ್ಸಿಗಳು ವಾರ್ತಾಇಲಾಖೆಯಲ್ಲಿ ಆಡಳಿತ ನಡೆಸಲು ಬಿಡಬಾರದೆಂದು ಅಧ್ಯಕ್ಷರು ಆಗ್ರಹಿಸಿದರು.

ಹೀಗಾಗಲೇ ಚಾಟಿ ಬೀಸಿದ್ದೇನೆ. ಅದರ ಪರಿಣಾಮ ಸಾಕಷ್ಟು ಕೆಲಸವಾಗುತ್ತಿವೆ. ಪತ್ರಿಕೆಗಳಿಂದ ನನಗೆ ಬಂದ ದೂರುಗಳನ್ನು ಆಧರಿಸಿ ಕೆಲವು ಏಜೆನ್ಸಿಗಳಿಗೆ ಸೋಕಾಸ್ ನೋಟೀಸ್ ನೀಡಿದ್ದೇನೆ. ಸರಿಪಡಿಸದಿದ್ದರೆ.ಕಠಿಣ ಕ್ರಮ ತೆಗೆದುಕೊಳ್ಳತ್ತೇನೆ ಎಂದು ಆಯುಕ್ತರು ಹೇಳಿದರು.