ಚಿತ್ರದುರ್ಗ: ಕೋಮುವಾದ, ಉಗ್ರವಾದ, ಹಿಂದುವಾದಕ್ಕೆ ಬದಲಾಗಿ ಜಗತ್ತಿಗೆ ಮಾನವತಾವಾದ ಬೇಕಾಗಿದೆ ಎಂದು ದಾಳಿಂಬೆ ಕೃಷಿ ಹಾಗೂ ಸಮಾಜಸೇವೆಯಲ್ಲಿ ಡಾಕ್ಟರೇಟ್ ಪಡೆದಿರುವ ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರಸ್ವಾಮೀಜಿ ಹೇಳಿದರು.

ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಕ್ರೀಡಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಮೇರಿಕಾದಲ್ಲಿ ಸಾಕಷ್ಟು ಚರ್ಚ್, ದೇವಸ್ಥಾನ, ಮಸೀದಿಗಳಿವೆ. ಅಲ್ಲಿ ಯಾರು ಮೈಕ್ ಬಳಸಿ ಜೋರಾಗಿ ಕೂಗುವುದಿಲ್ಲ. ಹಾಗಾಗಿ ಅಲ್ಲಿ ಜಾತಿ ಸಂಘರ್ಷ ನಡೆಯುವುದಿಲ್ಲ. ನಮ್ಮಲ್ಲಿ ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡಿಕೊಂಡು ಹಬ್ಬ, ಮೆರವಣಿಗೆಗಳನ್ನು ಆಚರಿಸುವುದನ್ನು ನೋಡುತ್ತಿದ್ದೇವೆ. ನಮ್ಮ ದೇಶದಲ್ಲಿ ಕಾನೂನು ಗಟ್ಟಿಯಾಗಿಲ್ಲದಿರುವುದರಿಂದ ದಿನಬೆಳಗಾದರೆ ಜಾತಿ ಕಲಹ ಧರ್ಮ ಕಲಹಗಳು ನಡೆಯುತ್ತಿವೆ ಎಂದು ಬೇಸರದಿಂದ ನುಡಿದರು.

ನಮ್ಮ ದೇಶದ ಕಾನೂನನ್ನು ಜಾತಿ ಪ್ರಭಾವದ ಮೇಲೆ ಮತಗಳಿಸುವ ರಾಜಕಾರಣವನ್ನಾಗಿ ಮಾಡಿಕೊಳ್ಳಲಾಗಿದೆ. ಇಡೀ ಜಗತ್ತಿಗೆ ಅಹಿಂಸಾ ಧರ್ಮವನ್ನು ಕೊಟ್ಟ ಭಾರತದಲ್ಲಿ ಅಸಹಿಷ್ಣುತೆ, ಬೆಂಕಿಬಿತ್ತುವ ಕೆಲಸ ನಡೆಯುತ್ತಿರುವುದು ನಿಜಕ್ಕೂ ದೊಡ್ಡ ದುರಂತ. ೯೦೦ ವರ್ಷಗಳ ಹಿಂದೆ ಬಸವಣ್ಣ ನೀಡಿದ ಧರ್ಮಕ್ಕೂ ಈಗಿನ ಧರ್ಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೆಲವು ಮಠಾಧೀಶರುಗಳು ಧರ್ಮವನ್ನು ಸರಿಯಾಗಿ ಅರ್ಥೈಸಿಕೊಂಡಿದ್ದರೆ ಹಿಂಸಾವಾದ, ಕೋಮುವಾದವೆಂಬುದೇ ಇರುತ್ತಿರಲಿಲ್ಲ. ಕಾಯಕ ಇಲ್ಲದವರ ಮನಸ್ಸುಗಳು ಮಾತ್ರ ಬೇರೆ ಬೇರೆ ಕೆಲಸಗಳತ್ತ ಚಿಂತಿಸುತ್ತಿರುವುದರಿಂದ ದೇಶದಲ್ಲಿ ಶಾಂತಿ ನೆಮ್ಮದಿಗೆ ಭಂಗವುಂಟಾಗುತ್ತಿದೆ. ಮಂದಿರ, ಮಸೀದಿಯನ್ನು ಎಲ್ಲರೂ ಗೌರವಿಸಬೇಕು. ಪಾಕಿಸ್ತಾನದಲ್ಲಿ ಕ್ರಿಕೆಟ್ ಗೆದ್ದರೆ ಇಲ್ಲಿ ಪಟಾಕಿ ಹೊಡೆಯುವುದು ಸರಿಯಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಸಿದರು.

ಬುದ್ದ, ಬಸವ, ಏಸು, ಪೈಗಂಬರ್, ಅಂಬೇಡ್ಕರ್ ಇವರುಗಳೆಲ್ಲಾ ಸಮಾನತೆಯನ್ನು ಬಯಸಿದವರು. ಜಾತಿಯಿಂದ ಆಚೆ ಮನುಷ್ಯನನ್ನು ನೋಡಿದ ಬಸವಣ್ಣ ಹೆಣ್ಣು-ಗಂಡು ಎಂಬ ಬೇದ ಮಾಡದೆ ಎಲ್ಲರೂ ಒಂದೆ ಎಂಬ ಶ್ರೇಷ್ಠ ಧರ್ಮವನ್ನು ಜಗತ್ತಿಗೆ ಕೊಟ್ಟವರು. ಧರ್ಮ ಎಂದರೆ ಹೋಮ, ಯಜ್ಞ, ಜಪ, ಪೂಜೆ, ಖಾವಿ, ರುದ್ರಾಕ್ಷಿ ಧರಿಸುವುದಲ್ಲ. ನಿಜವಾದ ಧರ್ಮ ಎಂದರೆ ಮಾನವೀಯತೆ ಎಂಬುದನ್ನು ಮೊದಲು ಮಠಾಧೀಶರಾದಿಯಾಗಿ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಬ್ರಿಟೀಷರು ಬರುವುದಕ್ಕಿಂತ ಮುಂಚೆ ಹಿಂದು-ಮುಸ್ಲಿಂರು ಒಂದಾಗಿದ್ದರು. ನಂತರ ಬೇರೆಯಾದರು. ಕಾಯಕವೇ ಕೈಲಾಸ, ದಯೆಯೇ ಧರ್ಮದ ಮೂಲ. ಕಾಯಕ, ದಾಸೋಹ, ಶಿವಯೋಗವನ್ನು ಎಲ್ಲಿಯವರೆಗೂ ಮಾನವ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯತನಕ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಹೇಳಿದರು.
ಪೈಗಂಬರ್, ಏಸು, ಬುದ್ದ, ಬಸವ ಇವರುಗಳೆಲ್ಲಾ ಪಾಪಿಗಳನ್ನು ಕ್ಷಮಿಸಿದವರು. ಆದರೆ ಇಂದು ಯಾವ ಧರ್ಮವೂ ಪವಿತ್ರವಾಗಿಲ್ಲ. ವಿಪರ್ಯಾಸವೆಂದರೆ ಧರ್ಮವನ್ನು ಅವಮಾನಿಸುವ, ಅಗೌರವಿಸುವ, ಅಪವಿತ್ರಗೊಳಿಸುವ ಮಠಾಧೀಶರುಗಳು ಇದ್ದಾರೆ. ಧರ್ಮದಿಂದ ಆಚೆ ಬದುಕನ್ನು ಕಟ್ಟಿಕೊಂಡಾಗ ಪರಸ್ಪರರು ಸೌಹಾರ್ಧತೆ, ಸಹಭಾಳ್ವೆಯಿಂದ ಬದುಕು ಕಟ್ಟಿಕೊಳ್ಳಬಹುದು ಎಂದರು.
ದಲಿತರು, ಶೋಷಿತರು, ಧ್ವನಿಯಿಲ್ಲದ ಕಟ್ಟಕಡೆಯವರನ್ನು ಮೇಲಕ್ಕೆತ್ತುವ ಕೆಲಸವನ್ನು ಎಲ್ಲಾ ಧರ್ಮಗಳು ಮಾಡಬೇಕಿದೆ. ದ್ವೇಷ, ಮತ್ಸರಗಳನ್ನು ನಿಲ್ಲಿಸಬೇಕಾಗಿರುವುದರಿಂದ ಮಠಾಧೀಶರುಗಳಿಗೂ ಸಹಿಷ್ಣುತೆ ಅತಿ ಮುಖ್ಯವಾಗಿ ಬೇಕು. ಹೋರಾಟವೆಂದರೆ ನೋವು, ಸಂಕಟ, ಹಿಂಸೆ, ಅವಮಾನ ಇದ್ದೇ ಇರುತ್ತದೆ. ಹಾಗಾಗಿ ಹೋರಾಟಗಾರರಿಗೆ ಆತುರತೆ ಇರಬಾರದು. ಎಲ್ಲವನ್ನು ತಡೆದುಕೊಳ್ಳುವ ಶಕ್ತಿ ಇದ್ದಾಗ ಮಾತ್ರ ನಿಜವಾಗಿಯೂ ಹೋರಾಟಗಾರನಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ವಂದೇ ಮಾತರಂ ಜಾಗೃತಿ ವೇದಿಕೆಯ ಕೆ.ಟಿ.ಶಿವಕುಮಾರ್ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶಾಂತವೀರಸ್ವಾಮಿ ಶ್ಲಾಘಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಈ.ಮಹೇಶ್‌ಬಾಬು, ಚೇಳುಗುಡ್ಡ ಮಸೀದಿ ಅಧ್ಯಕ್ಷ ಸುಬಾನ್ ವೇದಿಕೆಯಲ್ಲಿದ್ದರು.