ಚಿತ್ರದುರ್ಗ: ರಾಜ್ಯಾದ್ಯಂತ ಛಲವಾದಿ ಜನಾಂಗವನ್ನು ಸಂಘಟಿಸಬೇಕಾಗಿರುವುದರಿಂದ ಪ್ರತಿ ಜಿಲ್ಲೆಯಲ್ಲಿ ಸಮಿತಿ ರಚಿಸುವ ಸಂಬಂಧ ಪ್ರವಾಸಿ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದಿಂದ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಛಲವಾದಿ ಜನಾಂಗ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿರುವುದರಿಂದ ಮೊದಲು ಚಿತ್ರದುರ್ಗ ಜಿಲ್ಲಾ ಸಮಿತಿ ರಚಿಸಿ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಜಾಂಚಿಯನ್ನು ನೇಮಕ ಮಾಡಬೇಕಾಗಿದೆ. ಜನಾಂಗದ ಸಂಘಟನೆ ಕುರಿತು ಆಸಕ್ತಿಯಿರುವವರನ್ನು ಹುಡುಕಿ ಜವಾಬ್ದಾರಿ ನೀಡಬೇಕಾಗಿರುವುದರಿಂದ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜೂ.೩೦ ರಂದು ಬೆಳಿಗ್ಗೆ ೧೦-೩೦ ಕ್ಕೆ ಪ್ರವಾಸಿ ಮಂದಿರದಲ್ಲಿ ಮತ್ತೊಂದು ಸುತ್ತಿನ ಕೋರ್ ಕಮಿಟಿ ಸಭೆ ಕರೆದು ಅಂತಿಮವಾಗಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಿ ಜನಾಂಗಕ್ಕೆ ಶಕ್ತಿ ತುಂಬಬೇಕಾಗಿರುವುದರಿಂದ ಛಲವಾದಿ ಜನಾಂಗದವರು ತಪ್ಪದೆ ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ವಿನಂತಿಸಿದರು
ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಹಾಗೂ ಛಲವಾದಿ ಜನಾಂಗದ ವೈ.ತಿಪ್ಪೇಸ್ವಾಮಿ, ಮುಖಂಡರುಗಳಾದ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಹೆಚ್.ಹನುಮಂತಪ್ಪ, ನೆಲ್ಲಿಕಟ್ಟೆ ನಾಗರಾಜ್, ಜಿ.ಬಸವರಾಜು, ಎಸ್.ಹೆಚ್.ಗುರುಮೂರ್ತಿ, ನರಸಿಂಹಮೂರ್ತಿ, ಕೋಡೇಶ್, ಯಳಗೋಡು ಗ್ರಾ.ಪಂ.ಅಧ್ಯಕ್ಷ ನಿರಂಜನಮೂರ್ತಿ, ಹನುಮಂತಪ್ಪ, ಭೂತೇಶ್, ನಿಜಲಿಂಗಪ್ಪ, ರಾಘವೇಂದ್ರ, ಸ್ವಾಮಿ ಇನ್ನು ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.