ಚಿತ್ರದುರ್ಗ: ಚುನಾವಣಾ ಸಂದರ್ಭದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಯಾವುದೇ ಅವರ ಅಭಿಮಾನಿಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಚಾರ ನಡೆಸಿದಲ್ಲಿ ಖರ್ಚುವೆಚ್ಚಗಳು ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಾಜಕೀಯ ಪಕ್ಷಗಳ ಮುಖಂಡರು, ಕೇಬಲ್ ಆಪರೇಟರ್‌ಗಳು, ಮುದ್ರಣ ಮಾಲೀಕರು ಹಾಗೂ ವಿವಿಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ಸ್ ಮಾಧ್ಯಮ, ಕೇಬಲ್ ಟಿ.ವಿ. ಅಥವಾ ಸಾಮಾಜಿಕ ಜಾಲತಾಣಗಳಾದ ಫೆಸ್‌ಬುಕ್, ವಾಟ್ಸಪ್ ಗುಂಪು, ಮೊಬೈಲ್ ವಾಯ್ಸ್ ಎಸ್‌ಎಂಎಸ್ ಮೂಲಕ ಪ್ರಚಾರ ಮಾಡಲು ಮೀಡಿಯಾ ಸರ್ಟಿಫಿಕೇಷನ್ ಅಂಡ್ ಮಾನಿಟರಿಂಗ್ ಸಮಿತಿಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಒಂದು ವೇಳೆ ಅನುಮತಿ ಪಡೆಯದೇ ಜಾಹಿರಾತು ಪ್ರಕಟಿಸಿದಲ್ಲಿ ಅದು ಚುನಾವಣಾ ಅಪರಾಧವಾಗುತ್ತದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಯ ಪರವಾಗಿ ಅಗತ್ಯವಿರುವ ಅನುಮತಿಯನ್ನು ಪಡೆಯಲು ಒಬ್ಬರನ್ನು ತಮ್ಮ ಏಜೆಂಟ್ ಎಂದು ನೇಮಕ ಮಾಡಿಕೊಳ್ಳಲು ಅವಕಾಶ ಇದ್ದು ಇವರನ್ನು ಅಭ್ಯರ್ಥಿಯು ಘೋಷಣೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.
ಚುನಾವಣಾ ಕಣದಲ್ಲಿನ ಅಭ್ಯರ್ಥಿಗಳ ಪರವಾಗಿ ಯಾವುದೇ ಜಾಹಿರಾತನ್ನು ಅಭಿಮಾನಿಯಾಗಿ ನೀಡಿದಲ್ಲಿ ಅದನ್ನು ಸಹ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಪರಿಗಣಿಸಲಾಗುತ್ತದೆ. ಈ ಬಗ್ಗೆ ಅಭ್ಯರ್ಥಿಗೆ ನೋಟಿಸ್ ನೀಡಿ ವಿವರಣೆ ಪಡೆಯಲಾಗುತ್ತದೆ. ಒಂದು ವೇಳೆ ಅಭ್ಯರ್ಥಿ ಇದನ್ನು ನಿರಾಕರಿಸಿದಲ್ಲಿ, ಜಾಹಿರಾತು ನೀಡಿದವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಚುನಾವಣಾ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕರಪತ್ರಗಳನ್ನು ಮುದ್ರಿಸಲಾಗುತ್ತದೆ. ಮುದ್ರಿಸುವ ಮುಂಚೆ ನಿಗಧಿತ ನಮೂನೆಯಲ್ಲಿ ಸಂಬಂಧಿಸಿದವರಿಂದ ಸಹಿ ಪಡೆದಿರಬೇಕು. ಮತ್ತು ಮುದ್ರಣ ಮಾಡಿದ ನಂತರ ಸಂಬಂಧಿಸಿದ ಮುದ್ರಣ ಮಾಲೀಕರು ನಾಲ್ಕು ಪ್ರತಿಯೊಂದಿಗೆ ಮೂರು ದಿನಗಳೊಳಗಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಹಾಗೂ ಮುದ್ರಿಸಲಾದ ಕರಪತ್ರದ ಹಿಂಭಾಗದಲ್ಲಿ ಮುದ್ರಿಸಲಾದ ಪ್ರತಿಗಳ ಸಂಖ್ಯೆ, ಮುದ್ರಣ ಹೆಸರು, ವಿಳಾಸವನ್ನು ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಅನುಮತಿ ಇಲ್ಲದೆ ಪ್ರಕಟ ಮಾಡಿದಲ್ಲಿ ಅಂತಹ ಮುದ್ರಣಾಲಯಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದರು.
ಎಲೆಕ್ಟ್ರಾನಿಕ್ಸ್ ಮಾಧ್ಯಮ, ಸಾಮಾಜಿಕ ಜಾಲತಾಣ, ಜಾಹಿರಾತು, ಕಾಸಿಗಾಗಿ ಸುದ್ದಿಯ ಬಗ್ಗೆ ವೀಕ್ಷಣೆ ಮಾಡಲು ಚುನಾವಣಾ ದಿನಾಂಕ ಪ್ರಕಟವಾದ ನಂತರ ಮೀಡಿಯಾ ಮಾನಿಟರಿಂಗ್ ಸೆಲ್ ಕೆಲಸ ಮಾಡಲಿದೆ. ಕಾಸಿಗಾಗಿ ಸುದ್ದಿ ಮತ್ತು ಜಾಹಿರಾತು ಪ್ರಕಟಣೆಯಲ್ಲಿ ಅನುಮತಿ ಪಡೆಯದೇ ಇದ್ದಲ್ಲಿ ಪರಿಶೀಲನೆಗಾಗಿ ಮೀಡಿಯಾ ಸರ್ಟಿಫಿಕೇಷನ್ ಅಂಡ್ ಮಾನಿಟರಿಂಗ್ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಈ ಸಮಿತಿಯು ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ.
ಜಾಹಿರಾತಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಮಾಧ್ಯಮ, ಮುದ್ರಣ ಮಾಧ್ಯಮ, ಕೇಬಲ್ ಟಿ.ವಿ., ಕರಪತ್ರ ಮುದ್ರಣ ಸೇರಿದಂತೆ ಚುನಾವಣೆಗೆ ಸಂಬಂಧಿಸಿದಂತೆ ದರವನ್ನು ಪಡೆಯಲಾಗಿದ್ದು ವೇಳಾಪಟ್ಟಿ ಪ್ರಕಟವಾದ ಮೂರು ದಿನಗಳಲ್ಲಿ ಸಭೆಗೆ ನಡೆಸಿ ಚರ್ಚಿಸಿದ ನಂತರ ಅಂತಿಮಗೊಳಿಸಲಾಗುತ್ತದೆ. ಪ್ರಕಟಿಸಲಾದ ಜಾಹಿರಾತು ಅಳತೆ, ಸಮಯವನ್ನು ಪರಿಗಣಿಸಿ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು.
ಚುನಾವಣಾ ಸಂದರ್ಭದಲ್ಲಿ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಎಲ್ಲಾ ವಿಧವಾದ ಕಣ್ಗಾವಲು ವಹಿಸಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಯುತ ಚುನಾವಣೆ ನಡೆಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ಕೆ.ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಓಂಕಾರಪ್ಪ, ವಾರ್ತಾಧಿಕಾರಿ ಧನಂಜಯ, ವಿವಿಧ ಪಕ್ಷಗಳ ಮುಖಂಡರು, ಮಾಧ್ಯಮ ಪ್ರತಿನಿಧಿಗಳು, ಸಂಪಾದಕರು, ಕೇಬಲ್ ಆಪರೇಟರ್‌ಗಳು ಉಪಸ್ಥಿತರಿದ್ದರು