ಚಿತ್ರದುರ್ಗ: ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಅತ್ಯಂತ ಮುಕ್ತ, ಪಾರದರ್ಶಕವಾಗಿ ನಡೆಸಲು ಈ ಬಾರಿ, ನೀತಿ ಸಂಹಿತೆ ಉಲ್ಲಂಘನೆಯ ದೃಶ್ಯಾವಳಿ, ಛಾಯಾಚಿತ್ರಗಳನ್ನು ನೇರವಾಗಿ

ಅಪ್ಲೋಡ್ ಮಾಡಬಹುದಾದ ಮೊಬೈಲ್ ಅಫ್ಲಿಕೇಷನ್ ಸಿ-ವಿಜಿಲ್ ಎಂಬ ಆ್ಯಪ್ ಮೂಲಕ ಸಲ್ಲಿಸಬಹುದಾಗಿದ್ದು, ಸಾರ್ವಜನಿಕರು ಈ ಆ್ಯಪ್‍ನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಲೋಕಸಭಾ ಚುನಾವಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಅವಶ್ಯಕವಾಗಿದೆ.

ಅದಕ್ಕಾಗಿ ಈ ಬಾರಿ ಚುನಾವಣಾ ಆಯೋಗವು ಸಿ-ವಿಜಿಲ್ ಎಂಬ ಆ್ಯಪ್ ಅನ್ನು ಸಿದ್ದಪಡಿಸಿ, ಉಪಯೋಗಿಸಲು ಅವಕಾಶ ಕಲ್ಪಿಸಿದೆ. ಸಿ-ವಿಜಿಲ್ ಅಪ್ಲಿಕೇಷನ್ ಆಂಡ್ರಾಯಿಡ್ ಮೊಬೈಲ್‍ಗಳಲ್ಲಿ ಪ್ಲೇಸ್ಟೋರ್‍ನಲ್ಲಿ ಲಭ್ಯವಿರುತ್ತದೆ.

ಈ ಆಪ್ ಮೂಲಕ ನೀತಿ ಸಂಹಿತೆ ಉಲ್ಲಂಘನೆ ವೀಡಿಯೋ, ಪೆಟೋಗಳನ್ನು ನೇರವಾಗಿ ಅಪ್‍ಲೋಡ್ ಮಾಡಿದಲ್ಲಿ ಆಯಾ ಜಿಲ್ಲಾ ನಿಯಂತ್ರಣಾ ಕೇಂದ್ರಕ್ಕೆ ಬರುತ್ತದೆ. ಇದರಲ್ಲಿ ಐದು ನಿಮಿಷವುಳ್ಳ ವಿಡಿಯೋ, ಫೋಟೋ ಕಳುಹಿಸಲು ಅವಕಾಶ ಇದೆ. ಜಿಲ್ಲೆಯಲ್ಲಿ ಇದುವರೆಗೂ ಈ ಆ್ಯಪ್ ಮೂಲಕ ಕೇವಲ 9 ದೂರುಗಳು ಸಲ್ಲಿಕೆಯಾಗಿದ್ದು, ಆ್ಯಪ್‍ನ ಕಾರ್ಯವೈಖರಿ ಪ್ರಯೋಗ ಮಾಡುವ ಸಲುವಾಗಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಂಡು ಸಲ್ಲಿಕೆಯಾದ ದೂರುಗಳಾಗಿವೆ. ಯಾರೂ ಇಂತಹ ಅನಗತ್ಯ ಪ್ರಯೋಗಕ್ಕೆ ಮುಂದಾಗಬಾರದು. ಈ ಆ್ಯಪ್‍ನ ಸದ್ಬಳಕೆ ಮಾಡಿಕೊಳ್ಳಬೇಕು. ಇದಲ್ಲದೆ ಈಗಾಗಲೆ ಸಹಾಯವಾಣಿ 1950 ಕಾರ್ಯನಿರತವಾಗಿದ್ದು, ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುತ್ತಿದೆ. ಮತದಾರರು ಯಾವುದೇ ಮಾಹಿತಿ ಮತ್ತು ದೂರುಗಳಿಗೆ ಸಂಪರ್ಕಿಸಬಹುದಾಗಿದೆ. ಈ ಕುರಿತು ಮಾಧ್ಯಮಗಳು ವ್ಯಾಪಕ ಪ್ರಚಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.