ಚಿತ್ರದುರ್ಗ: ರಾಜ್ಯಾದ್ಯಂತ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಕಾಡು ಮೇಡಿನಲ್ಲಿ ಸುತ್ತಾಡಿದ್ದೇನೆ. ಹಾಗಾಗಿ ಚಿತ್ರದುರ್ಗ ಜಿಲ್ಲೆ ನನಗೆ ಹೊಸದಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ.ಅಭ್ಯರ್ಥಿ ಎ.ನಾರಾಯಣಸ್ವಾಮಿ ತಿಳಿಸಿದರು.

ಪವಾಡ ಪುರುಷ ನಾಯಕನಹಟ್ಟಿಯ ಶ್ರೀಗುರುತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಶುಕ್ರವಾರ ಭಾಗವಹಿಸಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶನಿವಾರದಿಂದ ಕ್ಷೇತ್ರಾದ್ಯಂತ ಮನೆ ಮನೆಗೆ ತೆರಳಿ ಪ್ರಧಾನಿ ಮೋದಿರವರ ಸಾಧನೆಗಳನ್ನು ಜನತೆಗೆ ತಿಳಿಸಿ ಮತಯಾಚಿಸುತ್ತೇನೆ. ಚುನಾವಣೆ ಎಂದ ಮೇಲೆ ಸೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವ ಗುಣ ರಾಜಕಾರಣಿಗಳಿಗೆ ಇರಬೇಕು. ದೇಶದ ಪ್ರಧಾನಿ, ರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಮತದಾರ. ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಭೋವಿ ಸಮಾಜಕ್ಕೆ ಟಿಕೇಟ್ ನೀಡಬೇಕೆಂದು ಭೋವಿ ಸಮಾಜದ ಸ್ವಾಮಿಗಳು ಆಗ್ರಹಿಸಿರುವುದು ಅವರ ಹಕ್ಕು. ಪ್ರತಿಯೊಂದು ಸಮಾಜಕ್ಕೂ ನಮ್ಮ ಸಮಾಜದ ಒಬ್ಬ ನಾಯಕನಿರಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಅದರಲ್ಲಿ ಯಾವ ತಪ್ಪಿಲ್ಲ. ಅವರ ಹೋರಾಟಕ್ಕೆ ನನ್ನ ಬೆಂಬಲವೂ ಇದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಇವರುಗಳು ನನ್ನ ಸಂಪರ್ಕದಲ್ಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು, ಮುಖಂಡರು, ಕಾರ್ಯಕರ್ತರು, ಸಂಘ ಪರಿವಾರದವರು ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಾರೆ. ಯಾವ ಅನುಮಾನವೂ ಇಲ್ಲ ಎಂದು ಹೇಳಿದರು.

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಿಂದ ನಲವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಶಾಸಕ ಎಂ.ಚಂದ್ರಪ್ಪ ಶಿಕ್ಷಣ ಕ್ಷೇತ್ರದಲ್ಲಿಯೂ ಪಳಗಿರುವುದರಿಂದ ಅವರೊಬ್ಬರು ಪ್ರಜ್ಞಾವಂತ ರಾಜಕಾರಣಿ. ಭೋವಿ ಸಮಾಜದಿಂದ ಒಬ್ಬರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಟಿಕೇಟ್ ನೀಡಿ ಎಂದು ವರಿಷ್ಟರನ್ನು ಆಗ್ರಹಿಸಿರುವುದು ಅವರ ಮೂಲಭೂತ ಹಕ್ಕು ಮತ್ತು ಹೋರಾಟ ಅದಕ್ಕೆ ನನ್ನ ಬೆಂಬಲವೂ ಸದಾ ಇದ್ದೇ ಇರುತ್ತದೆ ಎಂದರು.

ಪ್ರಧಾನಿ ಮೋದಿರವರು ಸಂಘ ಪರಿವಾರದಿಂದ ಬಂದವರು, ಅವರ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕ ಆಡಳಿತ, ರಾಷ್ಟ್ರಪ್ರೇಮ ದೇಶದ ಜನರಿಗೆ ಇಷ್ಟವಾಗಿದೆ. ಮೋದಿ ಅಲೆ ದೇಶದಲ್ಲಿರುವುದರಿಂದ ನನ್ನನ್ನು ಸೇರಿದಂತೆ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ.ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ಭವಿಷ್ಯ ನುಡಿದರು.

ದೇಶದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸೋತು ಗೆದ್ದಿದ್ದಾರೆ. ರಾಜಕಾರಣದಲ್ಲಿ ಸೋಲು-ಗೆಲುವನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಜಿಲ್ಲೆಯ ಎಲ್ಲಾ ಶಾಸಕರುಗಳು ಬಿಜೆಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಆದೇಶ ಪಾಲನೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ.ಕಾರ್ಯಕರ್ತರು, ಮುಖಂಡರುಗಳು ಚುನಾವಣೆಯನ್ನು ಎದುರಿಸುವಲ್ಲಿ ಶಕ್ತಿಶಾಲಿಗಳಾಗಿದ್ದಾರೆ. ನಾನು ಎಂದಿಗೂ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿಲ್ಲ. ಯಾವುದೇ ಆಯೋಗದ ವರದಿಯನ್ನು ಆಯಾ ಖಾತೆಯ ಮಂತ್ರಿ ಜವಾಬ್ದಾರಿಯಿಂದ ಸ್ವೀಕರಿಸಬೇಕಾಗುತ್ತದೆ. ಯಾವುದೇ ಸಮುದಾಯವನ್ನು ಮೀಸಲಾತಿಯಿಂದ ಹೊರಗೆ ಇಡುತ್ತೇನೆನ್ನುವುದು ನಿಜಕ್ಕೂ ಮೂರ್ಖತನ ಎಂದು ವಿರೋಧಿಗಳ ಹೇಳಿಕೆಗೆ ತಿರುಗೇಟು ನೀಡಿದರು.

ಬಿಜೆಪಿ.ಜಿಲ್ಲಾ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಎಂ.ಐ.ಟಿ.ಸ್ವಾಮಿ, ರಾಂದಾಸ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.