ಚಿತ್ರದುರ್ಗ: ಕನ್ನಡ ನಾಡು ನುಡಿ ನೆಲ ಜಲಕ್ಕೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ನಾವುಗಳು ಯಾವುದೇ ರಾಜಕೀಯ ಪಕ್ಷಗಳ ಪರ ವಿರೋಧಿಗಳಲ್ಲ. ಐತಿಹಾಸಿಕ ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಾಗಬೇಕೆಂಬುದೇ ನಮ್ಮ ಏಕೈಕ ಗುರಿ ಎಂದು ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿಪ್ಪಾಣಿಗೆ ಸ್ಥಳಾಂತರಗೊಂಡಿರುವುದನ್ನು ವಿರೋಧಿಸಿ ಧರಣಿ ನಡೆಸಿದ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆಂದು ಬಿಜೆಪಿ.ರಾಜ್ಯ ಕಾರ್ಯದರ್ಶಿ ಕೆ.ಎಸ್.ನವೀನ್ ಆರೋಪಿಸಿರುವುದರಲ್ಲಿ ಯಾವುದೇ ಹುರುಳಿಲ್ಲ. ಒನಕೆ ಓಬವ್ವ ವೃತ್ತದಲ್ಲಿ ಮೂರು ದಿನಗಳ ಕಾಲ ಧರಣಿ ನಡೆಸಿದ ಶಾಸಕರು ನಾಲ್ಕನೆ ದಿನ ತುರುವನೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಾಗ ಪೊಲೀಸರು ಬಂಧಿಸಿ ಹೋರಾಟವನ್ನು ಮೊಟಕುಗೊಳಿಸಿದರು. ಹೋರಾಟ ಶಾಂತಿಯುತವಾಗಿದ್ದಾಗ ಅಡ್ಡಿಪಡಿಸುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದ ಕೆ.ಟಿ.ಶಿವಕುಮಾರ್ ಪಕ್ಷ ಭೇದ ಮರೆತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಅಭಿವೃದ್ದಿಗೆ ಏಕೆ ಹೋರಾಡುವುದಿಲ್ಲವೆಂದು ಕಿಡಿ ಕಾರಿದರು.

ರಘುಮೂರ್ತಿ ವಿರುದ್ದ ಆಪಾದನೆ ಮಾಡಿರುವವರು ಚಿತ್ರದುರ್ಗಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಬೇರೆ ಕಡೆ ಸ್ಥಳಾಂತರಗೊಂಡಿರುವುದರ ವಿರುದ್ದ ಏಕೆ ಪ್ರತಿಭಟಿಸಲಿಲ್ಲ. ಶಾಸಕರು, ಮಠಾಧೀಶರು ಏಕೆ ಧ್ವನಿಎತ್ತುತ್ತಿಲ್ಲ. ಕೋವಿಡ್ ನೆಪದಲ್ಲಿ ರಾಜ್ಯ ಸರ್ಕಾರ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಮೆಡಿಕಲ್ ಕಾಲೇಜಿಗೆ ಪ್ರಾಮಾಣಿಕವಾಗಿ ಹೋರಾಡಿ ನಿಮ್ಮ ಜೊತೆ ನಾವಿರುತ್ತೇವೆಂದು ಜನಪ್ರತಿನಿಧಿಗಳಿಗೆ ಸವಾಲು ಹಾಕಿದ ಕೆ.ಟಿ.ಶಿವಕುಮಾರ್ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಸದುದ್ದೇಶದಿಂದ ಧರಣಿ ಕುಳಿತರೆ ವಿನಃ ಯಾರ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕಾಗಿ ಅಲ್ಲ ಎನ್ನುವುದನ್ನು ಮೊದಲು ವಿರೋಧಿಗಳು ಅರ್ಥಮಾಡಿಕೊಂಡು ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಳಿವಿಗಾಗಿ ಹೋರಾಡುವುದು ಸೂಕ್ತ. ಜಿಲ್ಲೆಯಲ್ಲಿ ಐವರು ಬಿಜೆಪಿ.ಶಾಸಕರು, ಒಬ್ಬ ಸಂಸದರಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಸರ್ಕಾರ ಆಧಿಕಾರದಲ್ಲಿದೆ. ಚಿತ್ರದುರ್ಗದ ಸಮಸ್ತ ಅಭಿವೃದ್ದಿಗೆ ಎಲ್ಲರೂ ಕೈಜೋಡಿಸಲಿ ಎಂದು ಮನವಿ ಮಾಡಿದರು.
ಕರ್ನಾಟಕ ನವ ನಿರ್ಮಾಣ ಸೇನೆ ನಗರಾಧ್ಯಕ್ಷ ಎಂ.ತಿಪ್ಪೇಸ್ವಾಮಿ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎಂ.ಚೌಡೇಶ್, ಗ್ರಾಮಾಂತರ ಅಧ್ಯಕ್ಷ ಶಿವರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣ ಗೌರಣ್ಣ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.