೩) ಮೂರನೇ ಸುತ್ತಿನಕೋಟೆ ಅಥವಾ ಕಾಮನ ಬಾಗಿಲು:-
ಗಾರೆಬಾಗಿಲಿನಿಂದ ದಕ್ಷಿಣಕ್ಕೆ ಸ್ವಲ್ಪ ದೂರ ಸಾಗಿದರೆ ಮೂರನೇ ಸುತ್ತಿನಕೋಟೆ ಕಾಣುತ್ತದೆ. ಇದು ಚಿನ್ಮೂಲಾದ್ರಿಯ ಸಪ್ತಶಿಖರಗಳನ್ನು ಸುತ್ತಿಕೊಂಡಿದೆ. ಇದರ ಇಕ್ಕೆಲಗಳಲ್ಲೂ ಆಳವಾದ ಅಗಳಿದೆ. ಇದರ ಹೆಬ್ಬಾಗಿಲನ್ನು ಕಾಮನಬಾಗಿಲು ಎನ್ನುತ್ತಾರೆ. ಇದು ಹತ್ತಿರ ಹೋಗುವವರೆಗೂ ಕಾಣುವುದಿಲ್ಲ.

ಅದರಲ್ಲಿ ಏಳು ಹೆಡೆ ಸರ್ಪ, ಗಂಡಭೇರುಂಡ, ರಾಜಹಂಸ, ಕಮಲ, ಕಾಮದೇವ, ಬಸವ, ಶಿವಲಿಂಗ, ಗಣೇಶ, ವೀರಭದ್ರ ಮೊದಲಾದ ಶಿಲ್ಪಗಳನ್ನು ಅಳವಡಿಸಲಾಗಿದೆ. ಅದರ ಮುಂದೆ ಆನೆಗೆ ನೀರು ಕುಡಿಸುತ್ತಿದ್ದ ಒಂದೇ ಕಲ್ಲಿನಲ್ಲಿ ಮಾಡಿದ ತೊಟ್ಟಿಯೂ, ಕಂದಕದಲ್ಲಿ ಕಾಮನಬಾವಿ ಎಂಬ ಜಲಾಶಯವೂ ಇದೆ. ಗಾರೆಯನ್ನಾಗಲೀ, ಮಣ್ಣನ್ನಾಗಲೀ ಬಳಸದೆ ಬೆಲ್ಲದ ಅಚ್ಚಿನಂತಹ ಭಾರೀ ಬಂಡೆಗಳನ್ನು ಉಪಯೋಗಿಸಿ ಕಟ್ಟಲಾಗಿದೆ. ಇದರ ಮೂಲಕ ಸಾಗುವ ಅಂಕುಡೊಂಕು ಮಾರ್ಗದಲ್ಲಿ ನಡೆದರೆ ಮಹಾದ್ವಾರ ಸಿಗುತ್ತದೆ. ಒಳ ಪ್ರವೇಶವು ಎರಡು ಕೋಟೆಗಳ ಮಧ್ಯೆ ಹೋಗುವುದು. ಕೋಟೆಯ ಮೇಲೆ ಎರಡು ಪಾರ್ಶ್ವಗಳಲ್ಲೂ ಯೋಧರು ನಿಂತು ಶತ್ರುಗಳು ನುಚ್ಚು ನೂರಾಗುವಂತೆ ಗುಂಡಿನ ಮಳೆಗರೆಯುತ್ತಿದ್ದರಂತೆ.

ಹುಲಿಯ ಬಾಯಲ್ಲಿ ಸಿಕ್ಕ ಮನುಷ್ಯನಂತೆ ಅರಿಗಳು ನಿರ್ನಾಮವಾಗುತ್ತಿದ್ದರು. ಇದಕ್ಕೆ ಹುಲಿ ಮುಖದ ಬಾಗಿಲು ಎಂದೂ ಹೆಸರಿದೆ. ಪ್ರವೇಶದ ಕೊನೆಯಲ್ಲಿ ಅಗಸೆ ಬಾಗಿಲು ಸಿಗುವುದು. ಇದರಲ್ಲಿ ಸಪ್ತಸ್ವರಗಳು ಪ್ರತಿಧ್ವನಿಸುತ್ತಿದ್ದವಂತೆ. ಈಗ ಕಲ್ಲಿನಿಂದ ಕುಟ್ಟಿದರೆ ಕಂಚಿನ ಧ್ವನಿ ಬರುತ್ತದೆ. ಇಲ್ಲಿಂದ ಗುಪ್ತ ಸಂಜ್ಞೆಗಳ ಮೂಲಕ ಅರಮನೆಗೆ ಸುದ್ಧಿ ಕಳುಹಿಸುತ್ತಿದ್ದರೆಂದು ತಿಳಿದು ಬರುತ್ತದೆ. ಕಾಮನಬಾಗಿಲಿನ ಪೂರ್ವದಿಕ್ಕಿನ ಬಯಲಿನಲ್ಲಿ ಕಾಳಿಕಾಮಠೇಶ್ವರಿ ದೇವಾಲಯವಿದೆ. ಇಲ್ಲಿಂದ ಬೆಟ್ಟದ ಮೇಲೆ ಹೋಗಲು ಒಂದು ಸುರಂಗ ಮಾರ್ಗವಿದೆ ಎನ್ನುತ್ತಾರೆ.

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.