ಉಚ್ಚಂಗಮ್ಮನ ಬಾಗಿಲು :- ಮೊದಲ ಸುತ್ತು ಕೋಟೆಯ ವಾಯುವ್ಯ ದಿಕ್ಕಿನಲ್ಲಿರುವ ಈ ಮಹಾದ್ವಾರಕ್ಕೆ ಉಪಮಹಾದ್ವಾರವೊಂದಿದೆ. ಅವುಗಳ ಮಧ್ಯೆ ಚೌಕಾಕಾರದ ಅಂಕಣವಿದೆ. ಪಾಳೆಯಗಾರರ ಮನೆದೇವತೆಯಾದ ಉಚ್ಚಂಗಮ್ಮ ಅಥವಾ ಉತ್ಸವಾಂಬೆಯ ಹೆಸರಿನಲ್ಲಿ ಈ ದ್ವಾರವು ನಿರ್ಮಿತವಾಗಿದೆ. ಈ ಮಹಾದ್ವಾರದ ಹೊರಭಾಗದಲ್ಲಿ ಸಿಹಿನೀರಿನ ಹೊಂಡ (ಉಚ್ಚಂಗಿಹೊಂಡ) ಎಂಬ ಜಲಾಶಯವಿದೆ.

ಹಿಂದೆ ವರ್ಷಕ್ಕೊಮ್ಮೆ ಇಲ್ಲಿ ಉಚ್ಚಂಗಮ್ಮನ ತೆಪ್ಪೋತ್ಸವ ನಡೆಯುತ್ತಿದ್ದಿತು. ಇಲ್ಲಿರುವ ಜಲಾಶಯವನ್ನು ದೇವತೆಯ ಅಭಿಷೇಕದ ನೀರಿಗಾಗಿ ನಿರ್ಮಿಸಲಾಯಿತು ಎಂದು ಜನಪದ ಗೀತೆಗಳಲ್ಲಿ ಹೇಳಲಾಗಿದೆ. ಈ ದ್ವಾರದ ಬಳಿ ನರಸಿಂಹ ಹಾಗೂ ಆಂಜನೇಯ ಗುಡಿಗಳು, ವೈಷ್ಣವ ಯತಿಗಳೊಬ್ಬರ ವೃಂದಾವನವೂ ಇವೆ.
ಹನುಮನ ಬಾಗಿಲು:- ಮೊದಲ ಸುತ್ತಿನ ಕೋಟೆಯ ಕೊನೆಯ ಹೆಬ್ಬಾಗಿಲೆಂದರೆ ಪಶ್ಚಿಮದಲ್ಲಿ ಹನುಮಂತ ದೇವಾಲಯ ಸಮೀಪದಲ್ಲಿದ್ದು, ಅವನ ಹೆಸರನ್ನು ಪಡೆದಿರುವ ಬಾಗಿಲು ಹನುಮನ ಬಾಗಿಲು. ಕೋಟೆಯ ಪಶ್ಚಿಮ ಭಾಗದಲ್ಲಿರುವ ಇಕ್ಕಟ್ಟಾದ ಕಣಿವೆ ಭಾಗದಲ್ಲಿ ಹನುಮನ ಬಾಗಿಲನ್ನು ನಿರ್ಮಿಸಲಾಗಿದೆ. ಪಾಳೆಯಗಾರರಿಗೆ ಹನುಮನೂ ಆರಾಧ್ಯ ದೈವ. ಅವರ ಧ್ವಜಲಾಂಛನ ಹನುಮದ್ಗರುಡ. ಈ ಬಾಗಿಲಿಗೆ ಒನಕೆ ಕಿಂಡಿ ಬಾಗಿಲೆಂತಲೂ ಕರೆಯುವರು. ರಕ್ಷಣೆಯ ದೃಷ್ಟಿಯಿಂದ ಮುಖ್ಯವಾಗಿದ್ದ ಈ ಬಾಗಿಲ ಸಮೀಪದಲ್ಲಿಯೇ ಪ್ರಸಿದ್ಧವಾದ ಒನಕೆಕಿಂಡಿ ಎನ್ನುವ ಚೋರಗಂಡಿಯಿದೆ. ಈ ಬಾಗಿಲಿನ ಕಮಾನಿನ ರಚನೆಯು ಕೋಟೆಯ ಆರನೇ ಮಹಾದ್ವಾರವಾದ ಟೀಕಿನಬಾಗಿಲು ಮತ್ತಿತರ ಬಾಗಿಲುಗಳ ರಚನೆಯನ್ನು ಹೋಲುತ್ತದೆ.

೨) ಎರಡನೇ ಸುತ್ತಿನಕೋಟೆ ಅಥವಾ ಗಾರೆಬಾಗಿಲು:-
ಉತ್ಸವಾಂಬಾ ದೇವಾಲಯದ ಮುಂದಿನ ರಸ್ತೆಯಲ್ಲಿ ದಕ್ಷಿಣಕ್ಕೆ ಸ್ವಲ್ಪ ದೂರ ಸಾಗಿದರೆ ಎರಡನೇ ಕೋಟೆಯ ಅವಶೇಷಗಳನ್ನೂ, ಅದರ ಹೆಬ್ಬಾಗಿಲಾದ ಗಾರೇಬಾಗಿಲನ್ನೂ ಕಾಣಬಹುದು. ಎರಡನೇ ಸುತ್ತಿನ ಕೋಟೆಯು ಚಿನ್ಮೂಲಾದ್ರಿಯ ಸಪ್ತಗಿರಿಗಳನ್ನು ಬಳಸಿದ್ದು ಈಗ ಅದರ ಹಲವಾರು ಭಾಗಗಳು ಬಿದ್ದು ಹೋಗಿವೆ. ಹಿಂದೆ ಈ ಕೋಟೆಯ ಕಂದಕವಿದ್ದ ಸ್ಥಳವು ಮುಚ್ಚಿಹೋಗಿದೆ. ಈ ಬಾಗಿಲಿನ ಪ್ರಾಕಾರಗಳಿಗೆ ನಯಗಾರೆಯಿಂದ ಕಟ್ಟಲಾಗಿರುವುದರಿಂದ ಗಾರೆಬಾಗಿಲು ಎಂಬ ಹೆಸರು ಬಂದಿದೆ. ಇದರ ಪಕ್ಕದಲ್ಲಿ ಗಾರೆಬಾಗಿಲ ಈಶ್ವರ ದೇವಾಲಯವಿದೆ. ದ್ವಾರದ ಎಡಕ್ಕಿರುವ ದಿಬ್ಬದ ಮೇಲೆ ಶ್ರೀಏಕನಾಥೇಶ್ವರಿ ದೇವಿಯ ಪಾದಗಟ್ಟೆ ಇದೆ. ಪ್ರತಿ ವರ್ಷ ಚೈತ್ರ ಮಾಸದಲ್ಲಿ ಇಲ್ಲಿ ನಡೆಯುವ ಸಿಡಿ ಎಂಬ ಜಾತ್ರೆಗೆ ಸಹಸ್ರಾರು ಜನ ಸೇರುತ್ತಾರೆ. ಇಲ್ಲಿಂದ ಬಸವನ ಬುರುಜಿಗೆ ಹೋಗಲು ಮಾರ್ಗವಿದೆ.

ಲೇಖನ ಸಂಗ್ರಹಕಾರರು :
ಕೆ.ಪಿ.ಎಂ. ಗಣೇಶಯ್ಯ, ರಂಗ ನಿರ್ದೇಶಕರು,

ಚಿತ್ರದುರ್ಗ.ಮೊ: 9448664878.